ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಇದರ ವತಿಯಿಂದ ಸಾಹಿತ್ಯ ಲೋಕದಲ್ಲಿ ಹೆಚ್.ಎಸ್. ಶಿವಪ್ರಕಾಶ್ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಗಾಯನ, ಪುಸ್ತಕ ಬಿಡುಗಡೆ ಮತ್ತು ರಂಗ ಗೌರವ ಕಾರ್ಯಕ್ರಮವನ್ನು ದಿನಾಂಕ 21 ಡಿಸೆಂಬರ್ 2025ರಂದು ಬೆಂಗಳೂರಿನ ಜೆ. ಸಿ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10-00 ಗಂಟೆಗೆ ಪ್ರಯೋಗ ರಂಗ ತಂಡದವರಿಂದ ಗಾಯನ ಪ್ರಸ್ತುತಿ, 10-30ಕ್ಕೆ ಹಿರಿಯ ಕವಿ ಅನ್ವರ್ ಆಲಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ‘ಹೆಚ್.ಎಸ್. ಶಿವಪ್ರಕಾಶ್ – ಬದುಕು ಬರಹ’ದ ಬಗ್ಗೆ ಕವಿ ಸಿರಾಜ್ ಅಹಮ್ಮದ್ ‘ಕಾವ್ಯ’, ಸಂಸ್ಕೃತಿ ಚಿಂತಕರಾದ ಡಾ. ಎಂ.ಎಸ್. ಆಶಾದೇವಿ ‘ಗದ್ಯ’ ಮತ್ತು ಗೋಷ್ಠಿ 2ರಲ್ಲಿ ರಂಗ ನಿರ್ದೇಶಕರಾದ ನಟರಾಜ ಹೊನ್ನವಳ್ಳಿ ಇವರು ‘ನಾಟಕಗಳು’, ಹಿರಿಯ ಸಾಹಿತಿ ಡಾ. ತಾರಿಣಿ ಶುಭದಾಯಿನಿ ಇವರು ‘ಅನುವಾದಗಳು’ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ಕಗ್ಗೆರೆ ಮಂಜುನಾಥ್ ಇವರು ಶಿವಪ್ರಕಾಶರ ‘ಸಮಗಾರ ಭೀಮವ್ವ’ ನೀಳ್ಗವಿತೆ ಅಭಿನಯಿಸಲಿದ್ದಾರೆ. 5-00 ಗಂಟೆಗೆ ಹೆಚ್.ಎಸ್.ಎಸ್. ಇವರೊಂದಿಗೆ ಸಂವಾದ ಹಾಗೂ 6-00 ಗಂಟೆಗೆ ಸಮಾರೋಪದಲ್ಲಿ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರಿಗೆ ‘ರಂಗ ಗೌರವ’ ನಡೆಯಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

