ಧಾರವಾಡ : ಧಾರವಾಡದ ಸಂಗೀತ ಪರಿಚಾರಕ ಅನಂತ ಹರಿಹರ ಅವರು ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾದವರು. ಕಲಾವಿದರಿಗೆ ಸ್ಫೂರ್ತಿಯ ಸೆಲೆಯಾದ ಯಶಸ್ವಿ ಸಂಘಟಕ, ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡವರು. ಅನಂತ ಹರಿಹರ ಅವರು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಅವರ ಸಂಸ್ಮರಣೆಯಲ್ಲಿ ಧಾರವಾಡದ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವವನ್ನು ಕ್ಷಮತಾ ಹುಬ್ಬಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ಜೀವನ ಬೀಮಾ ನಿಗಮ, ಸಂಗೀತಾಚಾರ್ಯ ಪಂ. ಡಿ. ವಿ. ಕಾಣೆಬುವಾ ಪ್ರತಿಷ್ಠಾನ ಪುಣೆ, ನಾನಾಸಾಹೇಬ ಅಳವಣಿ ಟ್ರಸ್ಟ್ ಪುಣೆ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿವೆ. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 22ರಿಂದ 24 ಡಿಸೆಂಬರ್ 2025ರವರೆಗೆ ಪ್ರತಿದಿನ ಸಂಜೆ ಸಪ್ತಸ್ವರಗಳ ಕಲರವ ರಿಂಗಣಿಸಲಿದೆ.
ದಿನಾಂಕ 22 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಸಂಗೀತೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಶ್ರೀ ಅರವಿಂದ ಬೆಲ್ಲದ ಮಾನ್ಯ ಶಾಸಕರು ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಶ್ರೀ ಕೆ.ಎಚ್. ಚೆನ್ನೂರ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀಮತಿ ರತ್ನಪ್ರಭಾ ಶಂಕರ್ ಮಾರುಕಟ್ಟೆ ವ್ಯವಸ್ಥಾಪಕರು ಭಾರತೀಯ ಜೀವನ ಬೀಮಾ ನಿಗಮ ಧಾರವಾಡ ವಲಯ ಹಾಗೂ ಶ್ರೀ ಗೋವಿಂದ ಜೋಶಿ ಸಂಚಾಲಕರು ಕ್ಷಮತಾ ಹುಬ್ಬಳ್ಳಿ ಇವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ದಿನಾಂಕ 24 ಡಿಸೆಂಬರ್ 2025ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸನ್ಮಾನ್ಯ ಶ್ರೀ ಪ್ರಲ್ಹಾದ ಜೋಶಿ ಆಹಾರ ಮತ್ತು ಸರಬರಾಜು ಹಾಗೂ ನವೀಕರಿಸಬಹುದಾದ ಇಂಧನ ಸಚಿವರು ಭಾರತ ಸರ್ಕಾರ, ಶ್ರೀ ಈರೇಶ ಅಂಚಟಗೇರಿ ಕಾರ್ಯಾಧ್ಯಕ್ಷರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಧಾರವಾಡ, ಶ್ರೀ ಬಿ.ಎಸ್. ಚಕ್ರವರ್ತಿ ಹಿರಿಯ ಮಂಡಲ ಪ್ರಬಂಧಕರು ಭಾರತೀಯ ಜೀವನ ಬೀಮಾ ನಿಗಮ ಧಾರವಾಡ ವಲಯ, ಶ್ರೀ ಕುಮಾರ ಬೆಕ್ಕೇರಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಮತ್ತು ಶ್ರೀ ಗೋವಿಂದ ಬೆಡೇಕರ ಅಧ್ಯಕ್ಷರು ಸಂಗೀತಾಚಾರ್ಯ ಪಂ. ಡಿ. ವಿ. ಕಾಣೆಬುವಾ ಪ್ರತಿಷ್ಠಾನ ಪುಣೆ ಇವರು ಭಾಗವಹಿಸಲಿದ್ದಾರೆ.
ದಿನಾಂಕ 22 ಡಿಸೆಂಬರ್ 2025ರಂದು ಪುಣೆಯ ವಿದುಷಿ ರುಚಿರಾ ಕೇದಾರ ಹಾಗೂ ಕಿರಾನಾ ಘರಾಣೆಯ ಮೇರು ಪ್ರತಿಭೆ ಪಂಡಿತ್ ಜಯತೀರ್ಥ ಮೇವುಂಡಿ ಇವರ ಗಾನಸುಧೆ ಹರಿದುಬರಲಿದೆ.
ದಿನಾಂಕ 23 ಡಿಸೆಂಬರ್ 2025ರಂದು ಪುಣೆಯ ಪ್ರಬುದ್ಧ ಗಾಯಕಿ ವಿದುಷಿ ಸಾವನಿ ಶೇಂಡೆ ಇವರಿಂದ ಸಂಗೀತ ನಿನಾದ ಮೂಡಿಬರಲಿದೆ. ನಂತರ ಪಂಡಿತ್ ಎಂ. ವೆಂಕಟೇಶಕುಮಾರ ತಮ್ಮ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ.
ದಿನಾಂಕ 24 ಡಿಸೆಂಬರ್ 2025ರಂದು ಪುಣೆಯ ಪಂಡಿತ್ ಸಂದೀಪ ಆಪ್ಟೆ ಇವರಿಂದ ಸಿತಾರ ತಂತುಗಳ ನಿನಾದ ಝೇಂಕರಿಸಿಲಿದೆ. ನಂತರ ಪುಣೆಯ ವಿದುಷಿ ಮಂಜೂಷಾ ಪಾಟೀಲ ಕುಲಕರ್ಣಿ ಇವರ ಗಾಯನದ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.
ಮೂರು ದಿನಗಳ ಈ ಸಂಗೀತೋತ್ಸವದಲ್ಲಿ ಡಾ. ಶ್ರೀಹರಿ ದಿಗ್ಗಾವಿ, ಶ್ರೀ ಕೇಶವ ಜೋಶಿ, ಉಸ್ತಾದ್ ನಿಸಾರ್ ಅಹಮ್ಮದ್ ಇವರು ತಬಲಾ ಸಾಥ್ ನೀಡಲಿದ್ದಾರೆ. ಶ್ರೀ ಬಸವರಾಜ ಹಿರೇಮಠ, ಶ್ರೀ ಸತೀಶ ಭಟ್ ಹೆಗ್ಗಾರ, ಶ್ರೀ ಸಾರಂಗ ಕುಲಕರ್ಣಿ, ಶ್ರೀ ಗುರುಪರಸಾದ ಹೆಗಡೆ ಇವರು ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ. ಮೂರೂ ದಿನಗಳ ಈ ಸಂಗೀತೋತ್ಸವಕ್ಕೆ ಪ್ರವೇಶ ಉಚಿತವಿದ್ದು ಮಹಾನಗರದ ಸಂಗೀತ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಗೋವಿಂದ ಜೋಶಿ ಮತ್ತು ಶ್ರೀ ಸಮೀರ ಜೋಶಿ ಕೋರಿದ್ದಾರೆ.

