ಉಡುಪಿಯ ರಾಗಧನ ಸಂಸ್ಥೆಯು ನಡೆಸುತ್ತಿರುವ ರಾಗರತ್ನಮಾಲಿಕೆ ಸರಣಿಯ 43ನೇ ಸಂಗೀತ ಕಾರ್ಯಕ್ರಮವು ದಿನಾಂಕ 16 ನವೆಂಬರ್ 2025ರಂದು ಮಣಿಪಾಲ ಡಾಟ್‌ನೆಟ್ ಸಭಾಂಗಣದಲ್ಲಿ ನಡೆಯಿತು. ಇಳಿಹಗಲಿನಲ್ಲಿ ಸಂಗೀತೋತ್ಸಾಹಿಗಳಾದ ಎಳೆಯರ ತಂಡ ಉದ್ಘಾಟನಾ ಪೂರ್ವ ಕಛೇರಿಯನ್ನು ನಡೆಸಿಕೊಟ್ಟಿತು. ಪ್ರದ್ಯುಮ್ನ ಭಾಗವತ್ (ಕೊಳಲು), ಪ್ರಮಥ್ ಭಾಗವತ್ (ವಯಲಿನ್) ಅಂತೆಯೇ ಪ್ರಜ್ನಾನ್ (ಮೃದಂಗ). ಮೂರು ಕಾಲಗಳಲ್ಲಿ ನುಡಿಸಲಾದ ನಾಟಕುರಂಜಿ (ಚಲಮೇಲ) ವರ್ಣದೊಂದಿಗೆ ಕಛೇರಿ ಪ್ರಾರಂಭ. ನಾಟ (ಮಹಾಗಣಪತಿಂ), ಸುಪೋಷೀಣಿ (ರಮಿಂಚುವಾರು) ಕೃತಿಗಳು ಶುದ್ಧವಾಗಿ ಮೂಡಿಬಂದವು. ಅತ್ಯಂತ ಗಾಂಭೀರ್ಯ ಮತ್ತು ತೂಕವನ್ನು ಅಪೇಕ್ಷಿಸುವ ಭೈರವಿ (ಕಾಮಾಕ್ಷಿ) ಸ್ವರಜತಿಯನ್ನು ಈ ಕಿಶೋರರು ಏಕರೂಪವಾಗಿ ನಿರ್ವಹಿಸಿದ ಪರಿ ಶ್ಲಾಘನೀಯ. ಪ್ರಧಾನ ರಾಗ ಕಾಂಭೋಜಿ (ಮರಕತವಲ್ಲೀಂ) ರಾಗ, ಸ್ವರ, ವಿಸ್ತಾರಗಳೊಂದಿಗೆ ಮೂಡಿಬಂತು. ಚಾರುಕೇಶಿಯ ನೀರೆತೋರೆಲೆದೇವರ ನಾಮದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಮೃದಂಗ ಸಹವಾದಕ ಬಾಲಕ ಪ್ರಜ್ಞಾನ್ ತನ್ನ ತನಿ ಆವರ್ತನದಲ್ಲಿ ಯಾವುದೇ ಹಿರಿಯ ಕಲಾವಿದರಂತೆ ನಡೆ, ಗತಿ, ಭೇದಗಳನ್ನು ಅನಾಯಾಸವಾಗಿ ಪ್ರಸ್ತುತ ಪಡಿಸಿ ರಸಿಕರ ಮನ ಗೆದ್ದನು. ಈ ಮೂವರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಎಲ್ಲಾ ಶ್ರೋತೃಗಳು ಮುಕ್ತವಾಗಿ ಶುಭ ಹಾರೈಸಿದ್ದಾರೆ.
ಪ್ರಧಾನ ಕಛೇರಿಯನ್ನು ನೀಡಿದ ಕಲಾವಿದೆ ಬೆಂಗಳೂರಿನ ಶ್ರೀಮತಿ ಮೇಧಾ ಮಂಜುನಾಥ್ ಇವರು ತಮ್ಮ ನಗುಮುಖ, ಇಂಪಾದ, ಸಂಸ್ಕಾರಯುತ ಶಾರೀರದೊಂದಿಗೆ ಪಾರಂಪರಿಕ ಚೌಕಟ್ಟನ್ನು ಕಾಯ್ದುಕೊಂಡು ಹೊಸ ಅನ್ವೇಷಣೆಗಳಲ್ಲಿ ನಿರತಳಾಗಿರುವ ನವಯುಗದ ಕಲಾವಿದೆ. ಬೆಹಾಗ್ ವರ್ಣದೊಂದಿಗೆ ಚೈತನ್ಯ ಪೂರ್ಣವಾದ ಪ್ರಾರಂಭ. ಕೀರವಾಣಿ (ಅಂಬವಾಣಿ), ಲಲಿತ ರಾಗದ (ಹಿರಣ್ಮಯೀಂ) ವಿಳಂಬ ಕಾಲ ಕೃತಿಯ ಅನಂತರ ಪ್ರಧಾನವಾಗಿ ಕಲ್ಯಾಣಿಯನ್ನು ಆಯ್ದುಕೊಳ್ಳಲಾಯಿತು. ಏನೇನೂ ಆತುರವಿಲ್ಲದೆ, ಸಾಕಷ್ಟು ವಿಶ್ರಾಂತಿ, ಶ್ರುತಿಲೀನತೆ ಮತ್ತು ಸೂಕ್ತವಿದ್ದಲ್ಲಿ ‘ಅ’ ಕಾರಗಳೊಂದಿಗೆ ರಾಗವನ್ನು ವಿಸ್ತರಿಸಿದ ಕಲಾವಿದೆ ‘ಭಜರೇರೇ ಚಿತ್ತ’ ಕೃತಿಯನ್ನು ಅಂದವಾದ ಸಂಗತಿಗಳಿಂದ ಅಲಂಕರಿಸಿದರು. ಪ್ರಬುದ್ಧವಾದ ನೆರವಲ್, ಹಲವಾರು ಚಿತ್ತಾರಗಳನ್ನು ಒಳಗೊಂಡ ಸ್ವರಗುಚ್ಛಗಳು, ಸುದೀರ್ಘವಾದ ಮುಕ್ತಾಯಗಳು ರಸಿಕರನ್ನು ಗೆದ್ದುಕೊಂಡವು. ಜಗನ್ಮೋಹಿನಿಯಲ್ಲಿ (ಶೋಭಿಲ್ಲು) ನೀಡಲಾದ ವಿಶಿಷ್ಟವಾದ ಸಂಗತಿಗಳು, ಸ್ವರವಿನಿಕೆಗಳು ಕೃತಿಗೆ ಹೆಚ್ಚಿನ ಮೌಲ್ಯವನ್ನು ತಂದುಕೊಟ್ಟಿವೆ.
ರಾಗಂ ತಾನಂ ಪಲ್ಲವಿಗಾಗಿ ಷಣ್ಮುಖಪ್ರಿಯ ರಾಗವನ್ನು ಎತ್ತಿಕೊಂಡ ಕಲಾವಿದೆ, ತಿಸ್ರಜಾತಿ ಅಟತಾಳ, ತಿಸ್ರ ನಡೆಯಲ್ಲಿ ಉಮಾಶಂಕರಿ . . ಪರಮೇಶ್ವರಿ. ಸದಾಶಿವ ಮನೋಹರಿ… ಕರುಣಾಕರಿ ಉ|| ಎಂಬ ಅತೀತ ಎಡುಪ್ಪಿನ ಪಲ್ಲವಿಯನ್ನು ಕ್ರಮಪ್ರಕಾರವಾಗಿ ನಿರೂಪಿಸಿದರು. ಪಲ್ಲವಿಯ ಪ್ರತಿಯೊಂದು ಸೊಲ್ಲುಗಳನ್ನೂ ‘ಎಡುಪ್ಪು’ ಆಗಿ ತೆಗೆದುಕೊಂಡು ನೀಡಲಾದ, ರಾಗಮಾಲಿಕೆ ಸ್ವರಕಲ್ಪನೆಗಳು ಗುಣಗ್ರಾಹಿ ಶ್ರೋತೃಗಳನ್ನು ಗೆದ್ದುಕೊಂಡವು. ಮುಖ್ಯ ಕಲಾವಿದೆಯ ಮನೋಧರ್ಮ ಓಘವನ್ನು ಸರಿಯಾಗಿ ಗುರುತಿಸಿ, ಕಚೇರಿಯುದ್ದಕ್ಕೂ ಅವರಿಗೆ ಸರಿಸಾಟಿಯಾಗಿ, ಸುಶ್ರಾವ್ಯವಾಗಿ ತಮ್ಮ ಬಿಲ್ಲುಗಾರಿಕೆಯನ್ನು ತೋರಿದ ವಯಲಿನ್ ಕಲಾವಿದೆ ಶ್ರುತಿ ಸಿ.ವಿ. ಶ್ರೋತೃಗಳ ಮುಕ್ತ ಪ್ರಶಂಸೆಯನ್ನು ಪಡೆದರು.
ಪ್ರೋತ್ಸಾಹದಾಯಕವಾದ ಸಹವಾದನ ಮತ್ತು ವಿದ್ವತ್ಪೂರ್ಣವಾದ ತನಿ ಆವರ್ತನಗಳಿಂದ ಸಭಿಕರ ಮನಗೆದ್ದುಕೊಂಡು, ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆಯನ್ನು ನೀಡಿದ ಶ್ರೀ ವಿನೋದ್ ಶ್ಯಾಂ ಆನೂರು (ಮೃದಂಗ), ಶ್ರೀ ಸುಮಧುರ ಆನೂರು (ಖಂಜೀರ) ಕಛೇರಿಯ ಯಶೋಭಾಗಿಗಳಾಗಿದ್ದಾರೆ. ಬೃಂದಾವನಿ ದೇವರನಾಮದೊಂದಿಗೆ ಕಛೇರಿ ಯಶಸ್ವಿಯಾಗಿ ಸಮಾಪನಗೊಂಡಿತು.
ವಿಮರ್ಶಕಿ ವಿದುಷಿ ಸರೋಜಾ ಆರ್. ಆಚಾರ್ಯ
ಹಿರಿಯ ಸಂಗೀತ ಗಾಯಕಿ, ಸಂಗೀತ ವಿಮರ್ಶಕಿ ಹಾಗೂ ಕನ್ನಡ ಲೇಖಕಿ
