ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ ದಿನಾಂಕ 28 ಡಿಸೆಂಬರ್ 2025ರಂದು ಕೊಯ್ಯೂರಿನಲ್ಲಿ ನಡೆಯಲಿರುವ 19ನೇಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ, ಸಾಂಸ್ಕೃ ತಿಕ ಹಾಗೂ ಸಾಹಿತ್ಯ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ ಇವರು ಆಯ್ಕೆಯಾಗಿದ್ದಾರೆ.
ಸಮ್ಮೇಳನ ಸಂಯೋಜನಾ ಸಮಿತಿ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಸಮಾಲೋಚನೆಯ ಬಳಿಕ ಕ.ಸಾ.ಪ. ತಾಲೂಕು ಅಧ್ಯಕ್ಷ ಡಿ. ಯದುಪತಿ ಗೌಡ ಸಮ್ಮೇಳನಾಧ್ಯಕ್ಷರ ಹೆಸರು ಘೋಷಿಸಿದರು. ಯಕ್ಷಗಾನ ಕಲಾ ಸಂಘಟನೆ, ಸಾಂಸ್ಕೃ ತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಇವರನ್ನು ಆಯ್ಕೆಗೊಳಿಸಲಾಗಿದೆ. ಬಂಗ್ವಾಡಿಯ ಬಿ. ಪದ್ಮನಾಭ ಶೆಟ್ಟಿ ಮತ್ತು ಅನಂತಮತಿ ದಂಪತಿಯ ಪುತ್ರನಾಗಿ ಜನಿಸಿದ ಭುಜಬಲಿಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಾರುಪತ್ಯಗಾರ, ಜಮಾ ಉಗ್ರಾಣದಲ್ಲಿ ಮುತ್ಸದ್ದಿಯಾಗಿ ವಿವಿಧ ಸ್ಥರಗಳಲ್ಲಿ 48 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಕಲಾಪ್ರೇಮಿಗಳಾಗಿ ಕಲಾವಿದರನ್ನು ಸಂಘಟಿಸಿ ಯಕ್ಷಗಾನ ಪ್ರಸಂಗ, ಜಿನಕಥೆ, ಹರಿಕಥೆ, ತಾಳಮದ್ದಳೆ, ಭಕ್ತಿಗೀತೆಗಳು, ಪ್ರವಚನ, ಕಾವ್ಯ ವಾಚನ, ರಾಮಾಯಣ, ಮಹಾಭಾರತ, ಜೈನ ಧರ್ಮ ಮತ್ತು ಇತರ ಧರ್ಮಗಳ ಕುರಿತು ಹತ್ತು ಹಲವು ವಿವಿಧ ಮಾಧ್ಯಮ ಧ್ವನಿ ಮುದ್ರಿಕೆಗಳ ಮೂಲಕ 100ಕ್ಕೂ ಹೆಚ್ಚು ಧ್ವನಿ ಸುರುಳಿಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ. ಹಲವು ಪ್ರಶಸ್ತಿಗಳಿಗೆ ಇವರು ಬಾಜನರಾಗಿದ್ದಾರೆ.
