ಬ್ರಹ್ಮಾವರ : ಉಡುಪಿ ಅಮ್ಮುಂಜೆಯ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಅಂಗವಾಗಿ ‘ನೃತ್ಯ ಪರಂಪರಾ’ ಭರತನಾಟ್ಯ ಪ್ರಾತ್ಯಕ್ಷಿಕೆಯ ಉದ್ಘಾಟನ ಕಾರ್ಯಕ್ರಮವು ದಿನಾಂಕ 22 ಡಿಸೆಂಬರ್ 2025ರಂದು ಕೆ.ಪಿ.ಎಸ್. ಪ್ರೌಢಶಾಲೆ ಬ್ರಹ್ಮಾವರದಲ್ಲಿ ನಡೆಯಿತು. ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ…1 ಇದರ ಅಂಗವಾಗಿ ‘ನೃತ್ಯ ಪರಂಪರಾ’ ಸಂಸ್ಕೃತಿ-ಆರೋಗ್ಯ-ಶಿಕ್ಷಣ ಎಂಬ ವಿಷಯದಲ್ಲಿ ಭರತನಾಟ್ಯ ಪ್ರಾತ್ಯಕ್ಷಿಕೆ ಪ್ರಸ್ತುತಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಉಡುಪಿ ಇಲಾಖೆಯ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವು ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ನೃತ್ಯ ಪರಂಪರೆ ಬಗ್ಗೆ ಮಾತನಾಡುತ್ತಾ “ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಎಷ್ಟು ಮುಖ್ಯವೋ ಅದೇ ರೀತಿ ಈ ಕಲೆ ಸಂಸ್ಕೃತಿಯ ಕಲಿಕೆ ಕೂಡ ಅತ್ಯವಶ್ಯ. ಪುರಾಣ ಕಥೆಗಳ ಅರಿವಿನ ಭರತನಾಟ್ಯದಿಂದ ಧರ್ಮ ಸಂಸ್ಕೃತಿ ಉಳಿವು ಸಾಧ್ಯ” ಎಂಬ ಸಂದೇಶ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ನಿರ್ದೇಶಕರು ಹಾಗೂ ವಿದ್ವಾನ್ ಭವಾನಿಶಂಕರ್ ಅವರ ಗುರುಗಳಾದ ವಿದುಷಿ ವೀಣಾ ಎಂ. ಸಾಮಗ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಹಾವಂಜೆ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಅರುಣ್ ಭಂಡಾರಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಗಾಣಿಗ ಹಾರಾಡಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಾಟ್ಯಾಲಯದ ಸಂಸ್ಥಾಪಕರಾದ ನೃತ್ಯಗುರು ವಿದ್ವಾನ್ ಕೆ. ಭವಾನಿಶಂಕರ್ ಇವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುವುದರೊಂದಿಗೆ ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ ಎಂಬ ಶೀರ್ಷಿಕೆಯೊಂದಿಗೆ 25 ಶೈಕ್ಷಣಿಕ ಸಂಸ್ಥೆಗಳಲ್ಲಿ ನೃತ್ಯ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಯೋಚನೆಗಳೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ನಾಟ್ಯಾಲಯದ ಹಿರಿಯ ಕಲಾವಿದರಾದ ವಿದುಷಿ ಶೇಫಾಲಿ, ವಿದುಷಿ ಸಂಜನಾ ಜೆ. ಸುವರ್ಣ, ವಿದುಷಿ ಕಾತ್ಯಾಯಿನಿ, ಸಾತ್ವಿಕ್ ಕೆ., ದಿಶಾನ್ ಹಾಗೂ ತನ್ವಿ ಇವರಿಂದ ಭರತನಾಟ್ಯ ಪ್ರಾತ್ಯಕ್ಷಿಕೆ ಪ್ರಸ್ತುತಗೊಂಡಿತು. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ನಿರೂಪಿಸಿದರು.
