ಕಾಸರಗೋಡು : “ಸಂಗೀತಕ್ಕೆ ಜನರನ್ನು ಒಟ್ಟು ಮಾಡುವ ಶಕ್ತಿಯಿದೆ. ಒಳ್ಳೆಯ ಸಂಗೀತವನ್ನು ಕೇಳುವುದರ ಜೊತೆಗೆ ಅನುಭವಿಸಬೇಕು. ಆಗಲೇ ಹೃದಯದ ಕಪಾಟು ತೆರೆದುಕೊಳ್ಳುತ್ತದೆ.” ಎಂದು ಖ್ಯಾತ ಕೀರ್ತನಕಾರ ಛಾಯಾ ಚಿತ್ರಗ್ರಾಹಕ ಕಲಾವಿದ ಪ್ರಭಾಕರ ರಾವ್ ಹೇಳಿದರು.

ಅವರು ‘ರಂಗಚಿನ್ನಾರಿ’ಯ ಸಂಗೀತ ಘಟಕ ‘ಸ್ವರಚಿನ್ನಾರಿ’ ನೇತೃತ್ವದಲ್ಲಿ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 21 ಡಿಸೆಂಬರ್ 2025ರ ಭಾನುವಾರ ಜರಗಿದ ‘ಅಂತರ್ಧ್ವನಿ -12’ ಕರೋಕೆ ಗಾಯಕರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡುತ್ತಿದ್ದರು.


“ಈಗಿನ ಕಾಲದ ಕಲಾವಿದರಿಗೆ ಎಲ್ಲಾ ರೀತಿಯ ಸೌಕರ್ಯವಿದೆ. ಆದ್ದರಿಂದ ಹೆಚ್ಚೆಚ್ಚು ಕಲಾವಿದರು ಸಂಗೀತ ಕ್ಷೇತ್ರಕ್ಕೆ ಬರುತ್ತಾರೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಉದ್ಯಮಿ, ಸಮಾಜ ಸೇವಕ ಜೀವಾನಂದ ಪ್ರಭು ಮಾತನಾಡಿ “ಕಾಸರಗೋಡಿನ ಸಂಗೀತ ಕಲಾವಿದರಿಗೆ ಸೂಕ್ತ ವೇದಿಕೆ ನಿರ್ಮಾಣ ಮಾಡಿದ ‘ರಂಗಚಿನ್ನಾರಿ’ ಸಂಸ್ಥೆಯ ಸಂಗೀತ ಘಟಕ ‘ಸ್ವರಚಿನ್ನಾರಿ’ಯ ಪದಾಧಿಕಾರಿಗಳನ್ನು ಅಭಿನಂದಿಸಿದರಲ್ಲದೆ ಸತತ ಒಂದು ವರುಷಗಳಿಂದ ಹಾಡುತ್ತಿರುವ ಗಾಯಕ ಗಾಯಕಿಯರನ್ನು ಅಭಿನಂದಿಸಿದರು.


ಈ ಸಂದರ್ಭದಲ್ಲಿ ಕಾಸರಗೋಡಿನ ಖ್ಯಾತ ವೈದ್ಯರು, ಗಾಯಕರೂ ಆಗಿರುವ ಡಾ. ಸಂತೋಷ ಕಾಮತ್ ರವರು ‘ಪದ್ಮಗಿರಿ ಕಲಾ ಕುಟೀರ’ಕ್ಕೆ ‘ಭಾರತ ಮಾತೆ’ ಹಾಗೂ ‘ಛತ್ರಪತಿ ಶಿವಾಜಿ ಮಹಾರಾಜ’ರ ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿ ಹರಸಿದರು.

ವೇದಿಕೆಯಲ್ಲಿ ರಂಗ ಚಿನ್ನಾರಿ ಸಂಸ್ಥೆಯ ನಿರ್ದೇಶಕರೂ, ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರೂ ಆಗಿರುವ ಕೋಳಾರು ಸತೀಶ್ಚಂದ್ರ ಭಂಡಾರಿ, ರಂಗ ಕಲಾವಿದ ಉದಯ ಕುಮಾರ್ ಮನ್ನಿಪ್ಪಾಡಿ, ಗಾಯಕಿ ಶ್ರೀದೇವಿ, ಜನಾರ್ದನ ಅಣಂಗೂರು ಮುಂತಾದವರು ಉಪಸ್ಥಿತರಿದ್ದರು.

ರಂಗಚಿನ್ನಾರಿ ನಿರ್ದೇಶಕರೂ, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀದೇವಿ ಪ್ರಾರ್ಥಿಸಿದರು. ನಾರಿಚಿನ್ನಾರಿಯ ಅಧ್ಯಕ್ಷೆ ಶ್ರೀಮತಿ ಸವಿತಾ ಟೀಚರ್, ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ, ಸರ್ವಮಂಗಳಾ ಮುಂತಾದವರು ಉಪಸ್ಥಿತರಿದ್ದರು. ಗಾಯಕಿ, ಅಂತರ್ಧ್ವನಿಯ ಸಹ ಸಂಚಾಲಕಿ ಬಬಿತಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಖ್ಯಾತ ವೈದ್ಯರಾದ ಡಾ. ಕೆ.ಕೆ. ಶ್ಯಾನುಭೋಗ್, ನಿವೃತ್ತ ಮುಖ್ಯೋಪಾಧ್ಯಾಯರೂ, ಸಾಹಿತಿಗಳಾದ ವೈ. ಸತ್ಯನಾರಾಯಣ, ನ್ಯಾಯವಾದಿ ಎ.ಎನ್. ಅಶೋಕ ಕುಮಾರ್, ಶ್ರೀಮತಿ ಸವಿತಾ ಟೀಚರ್ ಮಾತನಾಡಿದರು.

ವೇದಿಕೆಯಲ್ಲಿ ಕಲಾವಿದ ಪ್ರಭಾಕರ ರಾವ್, ಶ್ರೀಮತಿ ಶ್ರೀದೇವಿ, ಜೀವಾನಂದ ಪ್ರಭು ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
