ಮಂಗಳೂರು : ಮುಸ್ಲಿಮ್ ಲೇಖಕರ ಸಂಘವು ದಿನಾಂಕ 12-05-2023ನೇ ಶುಕ್ರವಾರ ಕಂಕನಾಡಿ, ಜಮೀಯತುಲ್ ಫಲಾಹ್ ಸಭಾಂಗಣ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿವಂಗತ ಯು.ಟಿ.ಫರೀದ್ ಸ್ಮರಣಾರ್ಥ ನೀಡುವ 2021ನೇ ಸಾಲಿನ ”ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿದ ಬರಹಗಾರ ಬೆಂಗಳೂರಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಯಾಗಿರುವ ಡಾ. ನೂರ್ ಸಮದ್ ಅಬ್ಬಲಗೆರೆ ಅವರು ಮಾತನಾಡುತ್ತಾ “ಪ್ರತಿಫಲದ ನಿರೀಕ್ಷೆಯಿಲ್ಲದೆ, ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡಿದರೆ ಪ್ರಪಂಚದಲ್ಲಿ ಏನನ್ನು ಬೇಕಾದರೂ ದಕ್ಕಿಸಿಕೊಳ್ಳಬಹುದು. ಪ್ರತಿಯೊಬ್ಬರ ಮಿದುಳಿನಲ್ಲೂ ದೇವರು ಜ್ಞಾನದ ಬೀಜ ಬಿತ್ತಿರುತ್ತಾನೆ. ಅದಕ್ಕೆ ಪೋಷಕಾಂಶ ನೀಡಿ ಜ್ಞಾನ ಉದ್ದೀಪನಗೊಳಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ.” ಎಂದರು.
‘ಪ್ರಜಾವಾಣಿಯ ಸಹಪಾಠಿ’ ಪತ್ರಿಕೆಯ ಕೀಟ ಪ್ರಪಂಚ ಅಂಕಣದಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ‘ವಿಸ್ಮಯ ಕೀಟ ಪ್ರಪಂಚ’ ಕೃತಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಅವರು, ಪತ್ರಿಕೆಯನ್ನು ಸ್ಮರಿಸಿದರು. ಪ್ರಶಸ್ತಿಯು ರೂ.10,000 ನಗದು, ಸ್ಮರಣಿಕೆಯನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಯು.ಟಿ.ಖಾದರ್ ಮಾತನಾಡಿ, “ಸಮಾಜದಲ್ಲಿ ಸಮುದಾಯಗಳ ನಡುವೆ ಪರಸ್ಪರ ಪ್ರೀತಿ ಬೆಳೆಸುವ, ಮನಸ್ಸುಗಳನ್ನು ಜೋಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಯುವ ಜನರಲ್ಲಿ ಇಂತಹ ಸಾಹಿತ್ಯದ ಅಭಿರುಚಿ ಬೆಳೆಸಬೇಕಾಗಿದೆ. ಪಾಲಕರು ಮಾಲ್‌ಗಳಿಗೆ, ಬೀಚ್‌ಗಳಿಗೆ ಮಕ್ಕಳನ್ನು ಕರೆದೊಯ್ಯುವಂತೆ ಸಾಹಿತ್ಯ ಕಾರ್ಯಕ್ರಮಗಳಿಗೂ ಕರೆದುಕೊಂಡು ಹೋಗಬೇಕು. ಮಕ್ಕಳಲ್ಲಿ ಪುಸ್ತಕ ಓದುವ, ಸಾಹಿತ್ಯದ ನುಡಿಗಳನ್ನು ಕೇಳುವ ಹವ್ಯಾಸ ಬೆಳೆಯಬೇಕು.” ಎಂದರು.
‘ಸೌಹಾರ್ದ ಪರಂಪರೆ ಅಂದು-ಇಂದು-ಮುಂದು’ ಕುರಿತು ಖ್ಯಾತ ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕ ಉಪನ್ಯಾಸ ನೀಡಿದರು. “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದದ ಪರಂಪರೆ ತಲತಲಾಂತರಗಳಿಂದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಸಮುದಾಯಗಳ ನಡುವೆ ದ್ವೇಷ ಬಿತ್ತುವ ಮನಃಸ್ಥಿತಿ ಬ್ಯಾನರ್‌ಗಳಿಗೆ ಸೀಮಿತವಾಗಬಹುದೇ ವಿನಾ ಜನರ ನಡುವಿನ ಸೌಹಾರ್ದವನ್ನು ಸುಲಭಕ್ಕೆ ಮುರಿಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಅಧ್ಯಕ್ಷತೆ ವಹಿಸಿದ್ದರು. ಕವಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ರಾಜಾರಾಮ ವರ್ಮ ವಿಟ್ಲ, ವಿಲ್ಸನ್ ಕಟೀಲ್, ಡಾ. ಅರುಣ್ ಉಳ್ಳಾಲ, ತನ್ಸೀರಾ ಆತೂರು ಕವನ ವಾಚಿಸಿದರು. ಏ.ಕೆ. ಕುಕ್ಕಿಲ ಸ್ವಾಗತಿಸಿ, ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿ, ಆಲಿ ಕುಂಞಿ ಪಾರೆ ವಂದಿಸಿದರು.