ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಇದರ ವಾರ್ಷಿಕ ಸಂಭ್ರಮ ‘ಶ್ರೀ ಆಂಜನೇಯ-57’ ಹಾಗೂ ಪ್ರಶಸ್ತಿ ಪ್ರದಾನವು ದಿನಾಂಕ 25 ಡಿಸೆಂಬರ್ 2025ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಆಶೀವರ್ಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮಾತನಾಡಿ “ಯಕ್ಷಗಾನ ಉಳಿದಿರುವುದು, ಅದು ಧಾರ್ಮಿಕ ನೆಲಕಟ್ಟನ್ನು ಉಳಿಸಿಕೊಂಡು ಬಂದಿರುವುದಕ್ಕೆ ಆಂಜನೇಯ ಯಕ್ಷಗಾನ ಕಲಾ ಸಂಘದಂತಹ ಸಂಘಟನೆಗಳೇ ಮುಖ್ಯ ಕಾರಣವಾಗಿದೆ. ಈ ಸಂಘಟನೆಗಳು ಯಕ್ಷಗಾನವನ್ನು ಜೀವನಕ್ಕಾಗಿ ಆರಿಸಿಕೊಂಡಿಲ್ಲ, ಜೀವನೋತ್ಸಾಹಕ್ಕೆ ಆರಿಸಿಕೊಂಡಿರುವುದು. ಮಾನಸಿಕ ನೆಮ್ಮದಿ ಹಾಗೂ ಕಲೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಹಾಗೂ ಪ್ರೇಕ್ಷಕರಿಗೆ ಅಭಿರುಚಿ ಉಣಿಸುತ್ತಾ ಮುಂದುವರಿಯುತ್ತಿದೆ. ಯುವ ಜನಾಂಗಕ್ಕೆ ಯಕ್ಷಗಾನದ ಅಭಿರುಚಿಯನ್ನು ಮುಂದುವರಿಸುವಲ್ಲಿ ಮಹಿಳಾ ಸಂಘಗಳ ಪ್ರಯತ್ನ ಬಹುಮಖ್ಯವಾಗಿದೆ. ಮಹಿಳೆಯರು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಲು ಕಾರಣವಾಗಿದೆ. ಯಕ್ಷಗಾನದಲ್ಲಿ ಸೇವೆ ಸಲ್ಲಿಸುತ್ತಿರುವ ಆಂಜನೇಯ ಯಕ್ಷಗಾನ ಕಲಾ ಸಂಘವು 57 ವರ್ಷಗಳನ್ನು ಪೂರೈಸುವ ಜೊತೆಗೆ ಮಹಿಳಾ ಸಂಘವು 20 ವರ್ಷದಿಂದ ಮುನ್ನಡೆಯುತ್ತಿರುವುದು ಸಾಧನೆಯಾಗಿದೆ. ಸಂಘದ ಮುಖಾಂತರ ಬಹಳಷ್ಟ ಕಾರ್ಯಕ್ರಮ ನೀಡುತ್ತಿದೆ. ಸಂಘವು ಇನ್ನಷ್ಟು ಹೆಚ್ಚಿನ ಕೀರ್ತಿಗಳಿಸುವ ಜೊತೆಗೆ ಯಕ್ಷಗಾನ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡುವಂತಾಗಲಿ” ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಅಭಿಮತ ಟಿವಿಯ ಆಡಳಿತ ಪಾಲುದಾರೆ ಡಾ. ಮಮತಾ ಪಿ. ಶೆಟ್ಟಿ ಮಾತನಾಡಿ, “ಯಕ್ಷಗಾನ ತುಳುನಾಡಿನ ಜಾನಪದ ಕಲೆಗಳಲ್ಲಿ ಒಂದು. ಯಕ್ಷಗಾನ ಮನೋರಂಜನೆಗಾಗಿ ಸೀಮಿತವಲ್ಲ, ತುಳುನಾಡಿನ ಧಾರ್ಮಿಕ ಆರಾಧನೆಯ ಒಂದು ಭಾಗ. ಎಲ್ಲಾ ಪಾತ್ರಗಳನ್ನು ಶ್ರದ್ದಾ ಭಕ್ತಿಯಿಂದ ನಿರ್ವಹಿಸುತ್ತಾರೆ. ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ಬದಲಾವಣೆ ಮಾಡಿ ಮನೋರಂಜನೆಗೆ ಆದ್ಯತೆ ನೀಡಲಾಗುತ್ತಿದ್ದು, ಯಕ್ಷಗಾನ ಮೂಲ ನಂಬಿಕೆಗೆ ಏಟು ಬೀಳುತ್ತಿದೆ. ಮನರಂಜನೆಯ ಜೊತೆಗೆ ಯಕ್ಷಗಾನ ಮೂಲ ನಂಬಿಕೆಗೆ ಏಟು ಬೀಳದಂತೆ ಮುನ್ನಡೆಯಲಿ. ಕಲೆಯ ಆರಾಧನೆ ಮಾಡುತ್ತಿರುವ ಅಂಜನೇಯ ಯಕ್ಷಗಾನ ಕಲಾ ಸಂಘವು ಕಲೆಗೆ ಜೀವ ತುಂಬುತ್ತಿದೆ. ಕಲಾವಿದರಿಗೆ ಅವಕಾಶ ನೀಡುತ್ತದೆ” ಎಂದು ಹೇಳಿದರು.

ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ, “ಯಕ್ಷಗಾನ ಕರಾವಳಿಯ ಗಂಡು ಕಲೆ. ಯಕ್ಷಗಾನದಲ್ಲಿ ಹಿಂದಿನ ಪರಂಪರೆ ಈಗ ಕಾಣಸಿಗುತ್ತಿಲ್ಲ. ಪೌರಾಣಿಕ ವಿಚಾರ ತಿಳಿಯುವಲ್ಲಿ ಯಕ್ಷಗಾನ ಸಹಕಾರಿಯಾಗಿದೆ. ಯಕ್ಷಗಾನ ಕಾಲ ಮಿತಿಗೆ ಸೀಮಿತವಾಗಿದ್ದು ಅದು ಇನ್ನಷ್ಟು ಕುಸಿಯಲಿದೆಯಾ ಎಂಬ ಅನುಮಾನವಿದೆ. ಇತರ ಕ್ಷೇತ್ರಗಳಿಗೆ ದೊರೆಯುವಷ್ಟು ಪ್ರೋತ್ಸಾಹ ಯಕ್ಷಗಾನಕ್ಕೆ ದೊರೆಯುವುದಿಲ್ಲ” ಎಂದು ಹೇಳಿದರು.
ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಮಾತನಾಡಿ “57 ಸಂವತ್ಸರಗಳನ್ನು ಪೂರೈಸಿದರುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ನಾಲ್ಕು ತಾಳಮದ್ದಳೆ ನೀಡುತ್ತಿದೆ. ಕಲೆ ನಿರಂತರ ಹರಿಯುವ ನೀರಾಗಬೇಕು ಎಂಬಂತೆ ಸಂಘ ಕಾರ್ಯನಿರ್ವಹಿಸುತ್ತಿದೆ. ಕಲಾಭಿಮಾನಿಗಳು ಹಾಗೂ ಸರ್ವರೂ ಸಂಘವನ್ನು ಪ್ರೀತಿಸಿ ಪ್ರೋತ್ಸಾಹಿಸಿ, ಸಹಕರಿಸುತ್ತಿದ್ದಾರೆ. ಹಿರಿಯರು ಕಟ್ಟಿದ ಸಂಘವನ್ನು ಬೆಳೆಸಲಾಗುತ್ತಿದೆ. ಬೆಳ್ಳಿ ಹಬ್ಬ, ಸುವರ್ಣ ಸಂಭ್ರಮವನ್ನು ಆಚರಿಸಿದೆ. ಮಹಿಳಾ ತಾಳಮದ್ದಳೆ ಬಹಳಷ್ಟು ನಡೆಯುತ್ತಿದೆ. ವರ್ಷಕ್ಕೆ ಒಂದು ಸಪ್ತಾಹ ನಡೆಸಿ ನಮ್ಮ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ.” ಎಂದರು.
ಹಿರಿಯ ಯಕ್ಷಗಾನ ಕಲಾವಿದರಾದ ಪಿ.ಟಿ. ಜಯರಾಮ ಭಟ್ ಪದ್ಯಾಣ ಇವರಿಗೆ ‘ಯಕ್ಷಾಂಜನೇಯ ಪ್ರಶಸ್ತಿ-2025’ ಹಾಗೂ ಉಬರಡ್ಕ ಉಮೇಶ ಶೆಟ್ಟಿಯವರಿಗೆ ‘ಶ್ರೀಮತಿ ಶಾಂತಾ ಮತ್ತು ಜಸ್ಟಿಸ್ ಜಗನ್ನಾಥ ಶೆಟ್ರಿ ಮೆಮೋರಿಯಲ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮಹಿಳಾ ಸಾಧಕಿ ಅಭಿಮತ ಟಿ.ವಿ.ಯ ಆಡಳಿತ ಪಾಲುದಾರೆ ಡಾ. ಮಮತಾ ಪಿ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಡಾ. ರಾಮಕೃಷ್ಣ ರಾವ್ ಪೂಕಳ, ಲಕ್ಷ್ಮೀ ನಾರಾಯಣ ಭಟ್, ದಿವಾಕರ ಆಚಾರ್ಯ ಗೇರುಕಟ್ಟೆ ಇವರನ್ನು ಗೌರವಿಸಲಾಯಿತು.
‘ಶ್ರೀಮತಿ ಶಾಂತಾ ಮತ್ತು ಜಸ್ಟಿಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿ’ ಸ್ವೀಕರಿಸಿದ ಉಬರಡ್ಕ ಉಮೇಶ್ ಶೆಟ್ಟಿ ಮಾತನಾಡಿ “ಕಲೆ, ಸಾಹಿತ್ಯ ಸಂಸ್ಕೃತಿಗಳ ಅಭಿರುಚಿ ಇಲ್ಲದವರ ಪಶುವಿಗೆ ಸಮಾನ. ಕಲಾವಿದರು ಎಲ್ಲಿ ಹೋದರೂ ಅವರನ್ನು ಜನತೆ ಗುರುತಿಸಿ ಗೌರವಿಸುತ್ತಾರೆ. ಕಲಾಭಿಮಾನಿಗಳ ಮೆಚ್ಚುಗೆ ಮಾತು ಕೇಳಿದಾಗ ಮನಸ್ಸು ರೋಮಾಂಚನವಾಗುತ್ತದೆ. ಪ್ರಶಸ್ತಿ ದೊರೆತಿರುವುದು ನನಗೆ ಬಹಳಷ್ಟು ಹೆಮ್ಮೆಯಾಗಿದೆ” ಎಂದರು.
‘ಯಕ್ಷಾಂಜನೇಯ ಪ್ರಶಸ್ತಿ’ ಸ್ವೀಕರಿಸಿದ ಪಿ.ಟಿ. ಜಯರಾಮ ಭಟ್ ಪದ್ಯಾಣ ಮಾತನಾಡಿ “ಭಾಗವತರಾಗಿ ನಾನು ಮೂರು ಮೇಳದಲ್ಲಿ ಸೇವೆ ಸಲ್ಲಿಸಿದ್ದೇನೆ. ಆಂಜನೇಯ ಯಕ್ಷಗಾನ ಕಲಾ ಸಂಘಕ್ಕೂ ನನಗೂ ಬಹಳ ವರ್ಷಗಳ ಸಂಬಂಧವಿದೆ. ಈಗ ಭಾಸ್ಕರ ಬಾರ್ಯರ ನೇತೃತ್ವದಲ್ಲಿ ಆಂಜನೇಯ ಯಕ್ಷಗಾನ ಕಲಾಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದರು.

ಅಭಿನಂದನಾ ಭಾಷಣ ಮಾಡಿದ ಗಣರಾಜ ಕುಂಬ್ಳೆ ಮಾತನಾಡಿ “ಪಿ.ಟಿ ಜಯರಾಮ ಭಟ್ ಪದ್ಯಾಣ ಅವರು, ಭಾಗವತಿಕೆ ಹಾಗೂ ಮದ್ದಳೆಯಲ್ಲಿ ಪ್ರಸಿದ್ದಿ ಪಡೆದವರು. ಪದ್ಯಾಣ ಎಂಬ ಊರಿಗೆ ಯಕ್ಷಗಾನದ ಕಲ್ಪನೆಯಿದೆ. ಪದ್ಯಾಣವು ಅನೇಕ ಕಲಾವಿದರಿಗೆ ವೇದಿಕೆ ನೀಡಿದ ಮನೆತನವಾಗಿದೆ. ಏಕಲವ್ಯನಂತೆ ಯಕ್ಷಗಾನ ವಿದ್ಯೆ ಪ್ರಾರಂಭಿಸಿ, ನಂತರ ಹವ್ಯಾಸಿ ಕಲಾವಿದರಾಗಿ ನಂತರ ಮೇಳದಲ್ಲಿ ಮುನ್ನಡೆದ ಅವರು ತಮ್ಮ ಕರ್ಮದಲ್ಲಿ ಕೌಶಲ್ಯವನ್ನು ಮೆರೆದವರು. ನಿಷ್ಠಾವಂತ ಕಲಾವಿದರಾಗಿರುವ ಉಮೇಶ್ ಶೆಟ್ಟಿಯವರು ಜೀವನದ ಬಹುಭಾಗ ಧರ್ಮಸ್ಥಳ ಮೇಳದಲ್ಲಿ ಕಳೆದವರು. ಇವರು ಸರ್ವಾಂಗ ಪರಿಣತ ಕಲಾವಿದರು. ಪುಂಡು ವೇಷದಾರಿಯಾಗಿ ಕಿರೀಟ ವೇಷದಾರಿಯಾಗಿ ರಂಗಸ್ಥಳದಲ್ಲಿ ಮಿಂಚಿನ ಸಂಚಾರ ಮಾಡಿದವರು” ಎಂದು ಹೇಳಿದರು.
ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್ ವರದಿ ವಾಚಿಸಿದರು. ಹರಿಣಾಕ್ಷಿ ಜಿ. ಶೆಟ್ಟಿ ಹಾಗೂ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ದುಗ್ಗಪ್ಪ ಎನ್. ವಂದಿಸಿದರು. ಈಶ್ವರ ಭಟ್ ಗುಂಡ್ಯಡ್ಕ, ಶಾರದಾ ಅರಸ್, ಕಿಶೋರಿ ದುಗ್ಗಪ್ಪ, ಶುಭ ಜಿ.ಸಿ. ಅಡಿಗ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಅಪರಾಹ್ನ ಪ್ರಾರಂಭಗೊಂಡ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉದ್ಘಾಟಿಸಿದರು. ಬಳಿಕ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ‘ವಿಪ್ರಕೂಟ’ ತಾಳಮದ್ದಳೆ, ನಂತರ ‘ಶ್ಯಮಂತಕಮಣಿ’ ತಾಳಮದ್ದಳೆ ನಡೆಯಿತು. ಭಾಗವತರಾಗಿ ಗಣೇಶ್ ಭಟ್ ಹೊಸಮೂಲೆ, ಭವ್ಯಶ್ರೀ ಕುಲ್ಕುಂದ, ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ. ಜಯರಾಮ ಭಟ್, ಕೃಷ್ಣಪ್ರಕಾಶ್ ಉಳಿತಾಯ, ಮುರಳೀಧರ ಕಲ್ಲೂರಾಯ, ಅರ್ಥದಾರಿಗಳಾಗಿ ಜಬ್ಬಾರ್ ಸಮೋ, ರವಿರಾಜ ಪನೆಯಾಲ, ಡಾ. ಪ್ರದೀಪ್ ಸಾಮಗ, ಗಣರಾಜ ಕುಂಬ್ಳೆ ಸಹಕರಿಸಿದರು.
