ಉಡುಪಿ : ರಂಗಭೂಮಿ (ರಿ) ಉಡುಪಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಮತ್ತು ಬೆಂಗಳೂರು, ಉಡುಪಿಯ ಪ್ರೌಢ ಶಾಲೆಗಳು, ರಂಗ ತಂಡಗಳು, ಕಲಾ ಪೋಷಕರು ಮತ್ತು ಎಂ.ಜಿ.ಎಂ. ಕಾಲೇಜಿನ ಸಹಕಾರದೊಂದಿಗೆ ‘ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ’ವನ್ನು ದಿನಾಂಕ 29 ಮತ್ತು 30 ಡಿಸೆಂಬರ್ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ದಿನಾಂಕ 29 ಡಿಸೆಂಬರ್ 2025ರಂದು ಬೆಳಿಗ್ಗೆ 9-30 ಗಂಟೆಗೆ ರಂಗಭೂಮಿ ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸ್ವರೂಪ ಟಿ.ಕೆ. ಇವರು ಈ ನಾಟಕೋತ್ಸವದ ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ ಗಂಟೆ 10-45ಕ್ಕೆ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳಿಂದ ‘ಪುಷ್ಪರಾಣಿ’, 11-45ಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಕಾಡಿನ ಪಕ್ಷಿ ಪ್ಯಾಟೆಗೆ ಬಂತು’, ಮಧ್ಯಾಹ್ನ ಗಂಟೆ 12-45ಕ್ಕೆ ಉಡುಪಿ ವಿದ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ‘ಅಳಿಲು ಮರಿಯ ಹೊರಳು ಸೇವೆ’, 2-30 ಗಂಟೆಗೆ ಆದಿಉಡುಪಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಲಂಬಕರ್ಣನ ಉಷ್ಣೇಶ’, 3-30 ಗಂಟೆಗೆ ಉಡುಪಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಕಾವ್ಯ ಕಥಾ ನಾಟಕ’, 4-30 ಗಂಟೆಗೆ ಮಣಿಪಾಲ ಪದವು ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ‘ಕಾಮನ್ ಸೆನ್ಸ್’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ದಿನಾಂಕ 30 ಡಿಸೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿ ಬೈಲಕೆರೆಯ ಶ್ರೀ ಅನಂತೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಒಮ್ಮೆ ಸಿಕ್ಕರೆ’, 11-00 ಗಂಟೆಗೆ ಉಡುಪಿ ನಿಟ್ಟೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಕತ್ತಲೆ ನಗರ ತಲೆಕೆಟ್ಟ ರಾಜ’, ಮಧ್ಯಾಹ್ನ 2-00 ಗಂಟೆಗೆ ಕುಂಜಿಬೆಟ್ಟು ಟಿ.ಎ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ‘ತಾರೆ’, 3-00 ಗಂಟೆಗೆ ಉಡುಪಿ ಸೈಂಟ್ ಸಿಸಿಲೀಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಅಳಿಲು ರಾಮಾಯಣ’ ಮತ್ತು 4-00 ಗಂಟೆಗೆ ಉಡುಪಿ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ‘End ಇಲ್ಲದ ಬಂಡ್ ಅವತಾರ’ ನಾಟಕಗಳು ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ 12-00 ಗಂಟೆಗೆ ರಂಗಭೂಮಿ ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅದಾನಿ ಗ್ರೂಪ್ಸ್ ಇದರ ಅಧ್ಯಕ್ಷರಾದ ಕಿಶೋರ್ ಆಳ್ವ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ.

