ಧಾರವಾಡ : ಅನುಷ್ಕಾ ಪ್ರಕಾಶನ, ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26 ಡಿಸೆಂಬರ್ 2025ರಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’, ವಿಕಾಸ ಹೊಸಮನಿಯವರ ‘ಜೀವ ಸಂವಾದ’, ಡಾ. ಸುಭಾಷ್ ಪಟ್ಟಾಜೆಯವರ ‘ಕಾಡುಸಂಪಿಗೆ’ ಮತ್ತು ‘ಮಾಲತಿ ಪಟ್ಟಣಶೆಟ್ಟಿ ವ್ಯಕ್ತಿತ್ವ – ಸಾಹಿತ್ಯ’ ಎಂಬ ನಾಲ್ಕು ಕೃತಿಗಳು ಲೋಕಾರ್ಪಣೆಗೊಂಡವು.
ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು “ಸಾಹಿತ್ಯ ಮನುಷ್ಯತ್ವದ ಘನತೆಯನ್ನು ಎತ್ತಿ ಹಿಡಿಯಬೇಕು. ಕರುಣೆ ಮತ್ತು ಕ್ರೌರ್ಯಗಳ ಸಂಘರ್ಷದಲ್ಲಿ ಕಾರುಣ್ಯ ಗೆಲ್ಲಬೇಕು. ಸಾಹಿತ್ಯವು ಒಂದು ಕಲೆ. ಅದು ಮಾನವನ ಅನುಭವದ ಸಾರವನ್ನು ಹಿಡಿದಿಟ್ಟು, ಓದುಗನ ಜೀವನದೊಂದಿಗೆ ಬೆರೆತು, ಅವನಿಗೆ ಅರ್ಥಪೂರ್ಣ ಅನುಭವವನ್ನು ನೀಡಬೇಕು. ಪ್ರಸ್ತುತ ಸಾಹಿತ್ಯದ ಕುರಿತು ಮಾತನಾಡುತ್ತಾ ಲೇಖಕರಿಗೆ ಶುಭವನ್ನು ಕೋರಿದರು.

‘ಜೀವ ಸಂವಾದ’ ಕೃತಿಯ ಕುರಿತು ಮಾತನಾಡಿದ ಪ್ರೊ. ಅರುಂಧತಿ ಸವದತ್ತಿಯವರು “ಐದು ದಶಕಗಳ ಕಾದಂಬರಿ ಸಾಹಿತ್ಯದ ಸಿಂಹಾವಲೋಕನ ಮಾಡುವುದು ಕಷ್ಟಕರ ಕೆಲಸ. ಆದರೆ ಲೇಖಕರು ಅದರಲ್ಲಿ ಸಫಲರಾಗಿದ್ದಾರೆ” ಎಂದು ಹೇಳಿದರು.

‘ಮಾಲತಿ ಪಟ್ಟಣಶೆಟ್ಟಿ ವ್ಯಕ್ತಿತ್ವ – ಸಾಹಿತ್ಯ’ ಕೃತಿಯ ಕುರಿತು ಮಾತನಾಡಿದ ಡಾ. ಅನಿತಾ ಗುಡಿ ಅವರು “ಸಂಘರ್ಷಮಯ ಜೀವನದ ಹಿನ್ನೆಲೆಯಿಂದ ಬಂದ ಮಾಲತಿಯವರು ಸಾಹಿತ್ಯ ಲೋಕದಲ್ಲಿ ಮಾಡಿದ ಸಾಧನೆ, ಇಂದಿನ ಯುವತಿಯರಿಗೆ ಸ್ಫೂರ್ತಿಯಾಗಬಲ್ಲ ಅವರ ವ್ಯಕ್ತಿತ್ವವನ್ನು ಈ ಕೃತಿಯು ವಸ್ತುನಿಷ್ಠವಾಗಿ ದಾಖಲಿಸಿದೆ” ಎಂದು ನುಡಿದರು.

‘ಕಾಡು ಸಂಪಿಗೆ’ ಕೃತಿಯ ಬಗ್ಗೆ ಮಾತನಾಡಿದ ಲಿಂಗರಾಜ ಸೊಟ್ಟಪ್ಪನವರ ಅವರು “ಗಂಡು ಹೆಣ್ಣಿನ ನಡುವಿನ ಸಂಕೀರ್ಣ ಸಂಬಂಧವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಕತೆಗಳು ಪ್ರೇಮ ಕಾಮಗಳ ಕುರಿತು ಮರುಚಿಂತನೆ ನಡೆಸಲು ಪ್ರೇರಣೆ ನೀಡುತ್ತವೆ” ಎಂದು ಅಭಿಪ್ರಾಯಪಟ್ಟರು.

ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ವಿಕಾಸ ಹೊಸಮನಿ ಮತ್ತು ಡಾ. ಸುಭಾಷ್ ಪಟ್ಟಾಜೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಡಿಂಪಲ್ ಪ್ರಾರ್ಥನಾ ಗೀತೆಯನ್ನು ಹಾಡಿ, ಕುಮಾರಿ ನಗೀನಾ ಸ್ವಾಗತಿಸಿ, ನಿರೂಪಿಸಿ, ಪ್ರೊ. ಸೀಮಾ ಕುಲಕರ್ಣಿ ವಂದಿಸಿದರು.

