ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ವತಿಯಿಂದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುಕ್ಕುಜಡ್ಕದ ಚೊಕ್ಕಾಡಿ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 30 ಡಿಸೆಂಬರ್ 2025ರಂದು ನಡೆಯಲಿದೆ.
ಮುಂಜಾನೆ ಗಂಟೆ 8-45ಕ್ಕೆ ಕುಕ್ಕುಜಡ್ಕ ಪೇಟೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ಹೊರಡಲಿದೆ. ಸಾಹಿತಿ ಕೆ.ಆರ್. ತೇಜಕುಮಾರ್ ಬಡ್ಡಡ್ಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, ಮೆರವಣಿಗೆಗೆ ಮಾಜಿ ಸಚಿವ ಎಸ್. ಅಂಗಾರ ಚಾಲನೆ ನೀಡಲಿದ್ದಾರೆ. ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಜಾನಕಿ ಕಂದಡ್ಕ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ಹಾಗೂ ಸುಳ್ಯ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಕೆ.ಪಿ. ಸುರೇಶ್ ಕಂಜರ್ಪಣೆ ಉದ್ಘಾಟಿಸಲಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ನೂತನ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಕೆ.ಆರ್. ತೇಜಕುಮಾರ್ ಬಡ್ಡಡ್ಕ ಬರೆದ ‘ಮಜಲಿನಾಚೆ’ ಕಥಾ ಸಂಕಲನ ಹಾಗೂ ಮಮತಾ ರವೀಶ್ ಪಡ್ಡಂಬೈಲು ಬರೆದ ‘ಗುಬ್ಬಿ ದನಿ’ ಕವನ ಸಂಕಲನ ಬಿಡುಗಡೆಯಾಗಲಿದ್ದು, ಬಳಿಕ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ನಡೆಯಲಿದೆ. ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶಾಲಿನಿ ಡಿ.ಎಲ್. ವಹಿಸಲಿದ್ದು, 11 ಮಂದಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ‘ಶಿಕ್ಷಣ ಮತ್ತು ಸಾಹಿತ್ಯ’ ಎಂಬ ವಿಷಯದ ಬಗ್ಗೆ ನಡೆಯಲಿರುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ವಹಿಸಲಿದ್ದು, ‘ಮಕ್ಕಳ ಕವಿತೆಗೆ ಹೊಸ ದಿಕ್ಕು’ ಎಂಬ ವಿಷಯದ ಬಗ್ಗೆ ರಾಧೇಶ್ ತೋಳ್ಪಾಡಿ ಮತ್ತು ‘ವರ್ತಮಾನದ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಪರಿಕಲ್ಪನೆಗಳು’ ಎಂಬ ವಿಷಯದ ಬಗ್ಗೆ ಸಾಹಿತಿ ಅರವಿಂದ ಚೊಕ್ಕಾಡಿ ವಿಷಯ ಮಂಡನೆ ಮಾಡಲಿದ್ದಾರೆ. ಬಳಿಕ ಕಾವ್ಯ ಕುಂಚ ಗಾಯನ ಪ್ರಸ್ತುತಗೊಳ್ಳಲಿದೆ.
ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಎಂ.ಟಿ. ಶಾಂತಿಮೂಲೆ (ಸಾಹಿತ್ಯ ಮತ್ತು ಕೃಷಿ). ಆನೆಕಾರ ಗಣಪಯ್ಯ (ಧಾರ್ಮಿಕ ಮತ್ತು ಸಂಘಟನೆ), ಸುಲೋಚನಾ ಪಿ.ಕೆ. (ಹಿರಿಯ ಸಾಹಿತಿ), ಮೋಹನ ಶೇಣಿ (ರಂಗಭೂಮಿ ಮತ್ತು ಚಲನಚಿತ್ರ), ಶೇಖರ ಮಣಿಯಾಣಿ (ಯಕ್ಷಗಾನ), ವೈಕುಂಠ ಪ್ರಭು (ಗಣಕ ಯಂತ್ರ ಪರಿಣಿತಿ), ಹರೀಶ್ ಮೋಟುಕಾನ (ಪತ್ರಿಕೋದ್ಯಮ), ಶ್ರೀನಿವಾಸ ಮಾಸ್ಟರ್ ಹಳೆಗೇಟು (ಶಿಲ್ಪಕಲೆ) ಚಂದ್ರಾ ಕೋಲ್ಚಾರ್ (ಸಹಕಾರ ಸಮಾಜಸೇವೆ), ಭವಾನಿ ವಸಂತ್ (ಕ್ರೀಡೆ), ವಿಜಿತ್ ಮೈತಡ್ಕ (ಭೂತಾರಾಧನೆ), ಇಬ್ರಾಹಿಂ ಸುಳ್ಯ (ವ್ಯಾಪಾರೋದ್ಯಮ) ಹಾಗೂ ಕನ್ನಡ ಕಸ್ತೂರಿ ಗೌರವಾರ್ಪಣೆಯು ಬಾಲ ಪ್ರತಿಭೆ ಭಾನವಿ ಪಿ.ಎಸ್. (ಕ್ರೀಡೆ) ಕ್ಷೇತ್ರದ ಸಾಧನೆಗಾಗಿ ಸನ್ಮಾನ ನೆರವೇರಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಕ್ಕುಜಡ್ಕದ ಭ್ರಾಮರಿ ನಾಟ್ಯಾಲಯದವರಿಂದ ‘ನೃತ್ಯ ವೈಭವ’ ಹಾಗೂ ಬೆಂಗಳೂರು ಕಾಜಾಣ ತಂಡದಿಂದ ಬೇಲೂರು ರಘು ನಂದನ್ ಇವರ ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಸಾಲು ಮರಗಳ ತಾಯಿ ತಿಮ್ಮಕ್ಕ’ ನಾಟಕ ಮೂಡಿ ಬರಲಿದೆ.

