ಮಂಗಳೂರು : ಮಂಗಳೂರಿನ ಸಪ್ನ ಬುಕ್ ಹೌಸ್ 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಕಟಿಸಿದ 70 ಕನ್ನಡ ಪುಸ್ತಕಗಳು ದಿನಾಂಕ 27 ಡಿಸೆಂಬರ್ 2025ರಂದು ಲೋಕಾರ್ಪಣೆಗೊಂಡವು.
ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ವಿದ್ವಾಂಸರಾದ ಪ್ರೊ. ಬಿ.ಎ. ವಿವೇಕ ರೈ “2022ರಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೂಲಕ ಸರಕಾರ ಮಾಡುತ್ತಿರುವ ಸಗಟು ಖರೀದಿ ನಡೆಯುತ್ತಿಲ್ಲ. ಇದನ್ನು ನಿಲ್ಲಿಸಿದರೆ ಲೇಖಕ ಪ್ರಕಾಶಕರು ಪ್ರಕಟಣೆಯನ್ನು ನಿಲ್ಲಿಸುತ್ತಾರೆ. ಮಾತ್ರವಲ್ಲ ಸಾರ್ವಜನಿಕ ಗ್ರಂಥಾಲಯಗಳು ಹೊಸಪುಸ್ತಕಗಳಿಲ್ಲದೇ ಪಳೆಯುಳಿಕೆಯಂತಾಗುತ್ತವೆ. ಇಂತಹ ಗ್ರಂಥಾಲಯಗಳನ್ನು ಹೆಚ್ಚು ಬಳಸುವ ಮಹಿಳೆಯರು, ಬಡವರು, ಮಕ್ಕಳಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತದೆ. ಸಗಟು ಖರೀದಿ ಆಯಾ ವರ್ಷವೇ ನಡೆಯುವಂತೆ ನೋಡಿಕೊಳ್ಳುವುದು ಸರಕಾರದ ಸಾಂಸ್ಕೃತಿಕ ಜವಾಬ್ದಾರಿ. ಪುಸ್ತಕ ಮಾರಾಟ ಮಳಿಗೆಗಳು ಸಂಪರ್ಕ ಸೇತುಗಳಾಗಿ ಕಾರ್ಯನಿರ್ವಹಿಸಬೇಕು. ಗುಜರಾತಿನಿಂದ ಬಂದು ನಿತಿನ್ ಷಾ ಅವರು ಸಪ್ನವನ್ನು ಆರಂಭಿಸಿ ತೋರುತ್ತಿರುವ ಕನ್ನಡ ಪ್ರೀತಿ ವಿಶೇಷವಾದುದು. ಕನ್ನಡಕ್ಕೆ ಮನ್ನಣೆ ಬರುವುದು ಕೇವಲ ಘೋಷಣೆ ಭಾಷಣಗಳಿಂದಲ್ಲ, ಇಂತಹ ಕೆಲಸಗಳಿಂದ. ಜಗತ್ತಿನ ಜ್ಞಾನ ಕನ್ನಡದ ಮೂಲಕ ಬರಬೇಕು. ಡಿಜಿಟಲ್ ವೇದಿಕೆಗಳಿಂದ ಮಾಹಿತಿ ಸಿಗಬಹುದು, ಆದರೆ ಮನಸಿನ ಸಾಂತ್ವಾನಕ್ಕೆ ಪುಸ್ತಕದ ಓದು ಬೇಕು. ಬುದ್ಧಿವಂತರ ಜಿಲ್ಲೆ ಎಂದು ಹೇಳಿಕೊಂಡರೆ ಸಾಲದು. ಓದಿನ ಮೂಲಕ ಅದನ್ನು ಹೆಚ್ಚಿಸಿಕೊಳ್ಳಬೇಕು. ಪುಸ್ತಕಗಳಿಂದ ಬಹುರೂಪಿ ಜ್ಞಾನ ಸಿಗುತ್ತದೆ, ಆಳವಾದ ಚಿಂತನೆ ದೊರೆಯುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ನರಸಿಂಹಮೂರ್ತಿ ಮಾತನಾಡಿ “ಹೊಸ ಓದುಗರನ್ನು ಆಕರ್ಷಿಸುವ, ಓದಿನ ಆಸಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ” ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಪುಸ್ತಕಗಳು ನಮಗೆ ಹೊಸ ವಿಷಯವನ್ನು ಪರಿಚಯಿಸುವ, ಹೊಸ ಲೋಕವನ್ನು ತೆರೆದು ತೋರಿಸುವ ಆತ್ಮ ಸಂಗಾತಿ. ಸಪ್ನದವರು ಪುಸ್ತಕ ಪ್ರಕಾಶನಕ್ಕೆ ಉದ್ಯಮದ ಘನತೆಯನ್ನು ತಂದುಕೊಟ್ಟಿದ್ದಾರೆ” ಎಂದರು.
ಸಪ್ನ ಬುಕ್ ಹೌಸ್ ಇದರ ಮಂಗಳೂರು ಶಾಖಾ ವ್ಯವಸ್ಥಾಪಕ ಪ್ರೀತೇಶ್, ಹಂಪನಕಟ್ಟ ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್, ಸುರತ್ಕಲ್ ನ ಪ್ರೊ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.
