ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ಪುತ್ತೂರು ತಾಲೂಕು ಕಚೇರಿಯ ಉಪ ತಹಶೀಲ್ದಾರ್ ಸುಲೋಚನಾ ಪಿ.ಕೆ. ಇವರ ‘ಮೂಗಿಯ ಮನದೊಳು’ ಚೊಚ್ಚಲ ಕನ್ನಡ ಕಾದಂಬರಿಯು ದಿನಾಂಕ 28 ಡಿಸೆಂಬರ್ 2025ರಂದು ಪುತ್ತೂರಿನ ಬೈಪಾಸ್ ರಸ್ತೆಯ ಬಳಿಯ ಡಾ. ಎನ್. ಸುಕುಮಾರ ಗೌಡರ ಮಕ್ಕಳ ಮಂಟಪದಲ್ಲಿ ಲೋಕಾರ್ಪಣೆಗೊಂಡಿತು.
ಡಾ. ತಾಳ್ತಜೆ ವಸಂತ ಕುಮಾರ ಇವರು ಕೃತಿಯನ್ನು ಲೋಕಾರ್ಪಣೆಗೊಳಿಸಿ, ಕೃತಿಯ ಬಗ್ಗೆ ಮಾತನಾಡುತ್ತಾ “ಕಾದಂಬರಿಗೆ ಸಿದ್ಧ ಶಿಲ್ಪದ ಹಿನ್ನಲೆಯಿದ್ದು, ಕಾದಂಬರಿಯ ಬೆಳವಣಿಗೆಯಲ್ಲಿ ಅತಿಮಾನುಷ ಅಂಶದ ಸ್ವರೂಪ ಮತ್ತು ಆಕೃತಿಯಲ್ಲಿ ತಾಂತ್ರಿಕ ವಿಷಯಗಳ ಪಾತ್ರಗಳನ್ನು ಅದ್ಭುತವಾಗಿ ಲೇಖಕಿ ಚಿತ್ರೀಕರಿಸಿರುತ್ತಾರೆ. ಸಾಂಸ್ಕೃತಿಕ ತಾತ್ತ್ವಿಕ ನೆಲೆಯನ್ನು ಹಿಡಿದಿಡುವಲ್ಲಿಯೂ ಈ ಕಾದಂಬರಿ ಮುಖ್ಯವಾಗಿದೆ. ಪಾತ್ರಗಳಿಗೆ ಹೆಸರುಗಳ ಆಯ್ಕೆ ಕಲಾತ್ಮಕವಾಗಿದ್ದು, ಆಯಾಯ ಸನ್ನವೇಷಕ್ಕೆ ಹೊಂದಿಕೆಯಾಗುವಂತಹ ಹೆಸರುಗಳ ಆಯ್ಕೆ ಮಾಡಿದ್ದು, ಪ್ರಧಾನ ಪಾತ್ರ ʼಮದುರಂಗಿʼ ಎಂಬ ಹೆಸರೇ ಬಹಳ ಸಾಂಕೇತಿಕವಾಗಿದೆ ಎಂದು ಡಾ. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಮತ್ತು ಸಾಹಿತಿ ಬೈರಪ್ಪನವರ ಕೃತಿಗಳ ಬಗ್ಗೆ ಉಲ್ಲೇಖಿಸಿದರು. ಅಂತಿಮದಲ್ಲಿ ಮದುರಂಗಿ, ‘ಮಾತೆ ಮದುರಂಗಿ’ ಆಗುವಂತಹದ್ದು ಈ ಕಾದಂಬರಿಯ ವಿಶೇಷತೆಯಾಗಿದೆ” ಎಂದು ನುಡಿದರು.

ಕಾದಂಬರಿಗೆ ಮುನ್ನುಡಿ ಬರೆದ ಸಾಹಿತಿ ಅರವಿಂದ ಚೊಕ್ಕಾಡಿಯವರು “ಕಾದಂಬರಿ ಸಾಹಿತ್ಯ ವಿನ್ಯಾಸಕ್ಕಿಂತ ಸಾಮಾಜಿಕ ವಿನ್ಯಾಸದಲ್ಲಿ ಮಹತ್ವದ್ದಾಗಿದ್ದು, ಓದುಗರಲ್ಲಿ ಒಂದು ಸೈಕಲಾಜಿಕಲ್ ಪ್ರೆಸರ್ ಅನ್ನು ಸೃಷ್ಠಿಸುವ ತಂತ್ರ ಮಹತ್ವದ್ದಾಗಿದ್ದು. ಪ್ರತಿ ಪಾತ್ರಗಳಿಗೂ ಸ್ವತಂತ್ರ ಜೀವನವಿದೆ. ಕಾದಂಬರಿಗಾರ್ತಿಯ ಕೈಯ ಗೊಂಬೆಗಳಾಗದೇ ಪಾತ್ರಗಳು ಸ್ವಯಂ ಚಾಲನೆಯ ಶಕ್ತಿಯನ್ನು ಹೊಂದಿರುವುದು ಕಾದಂಬರಿಯ ಯಶಸ್ಸಿನ ನಿರ್ಣಾಯಕ ಅಂಶವಾಗಿದೆ” ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಶ್ರೀ ರವೀಂದ್ರನಾಥ ಸಿರಿವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ಮತ್ತು ಪತ್ರಕರ್ತರಾದ ಶ್ರೀ ಪಾರ್ವತೀಶ ಬಿಳಿದಾಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಲೇಖಕಿಗೆ ಶುಭ ಹಾರೈಸಿದರು. ಬಳಿಕ ಶಿಕ್ಷಣ ತಜ್ಞ ಡಾ. ಎನ್ ಸುಕುಮಾರ ಗೌಡರನ್ನು ಇವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹಾಗೂ ಪ್ರದೀಪ್ ಕೃಷ್ಣ ಬಂಗಾರಡ್ಕ ಅಥಿತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕುಮಾರಿ ಸುದೀಕ್ಷ ಹಾಗೂ ಸುನಿಧಿ ಪಾರ್ಥನೆ ನೆರವೇರಿಸಿ ವೇದಿಕೆಗೆ ಸಹಕರಿಸಿದರು. ಲೇಖಕಿ ತನ್ನ ಪ್ರೌಢಶಾಲೆಯ ಗಣಿತ ಅಧ್ಯಾಪಕರಾದ ಶ್ರೀ ಆನಂದ ಏನೆಕಲ್ಲು ಮತ್ತು ಕವನ ಸಂಕಲನ ತಿದ್ದುಪಡಿಗೊಳಿಸಿದ ಬಾಲಕೃಷ್ಣ ಬೇರಿಕೆ ಇವರನ್ನು ನೆನಪಿಸಿ ಗೌರವಿಸಿದರು.
ಶ್ರೀ ಕೃಷ್ಣಪ್ಪ ಬಂಬಿಲ ಮತು ಶ್ರೀಮತಿ ಭವಾನಿ ಕಾದಂಬರಿಯ ಬಗ್ಗೆ ಲೇಖಕಿ ರಚಿಸಿದ ಗೀತೆಗೆ ಸ್ವರ ಸಂಯೋಜಿಸಿ ಹಾಡಿದರು. ಕಾಲೇಜು ಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ಶೃತಿ ಸ್ವಾಗತಿಸಿದರು. ಲೇಖಕಿ ಸುಲೋಚನಾ ಪಿ.ಕೆ. ಪ್ರಸ್ತಾವನೆಯೊಂದಿಗೆ ವಂದಿಸಿದರು ಹಾಗೂ ತಮ್ಮ ಸ್ವರಚಿತ ಜನಪದ ಹಾಡಿನಿಂದ ಮನರಂಜಿಸಿದರು. ಶ್ರೀಕಲಾ ಕಾರಂತ ಎರುಂಬು ಕಾರ್ಯಕ್ರಮ ನಿರೂಪಿಸಿದರು ಹಾಗೂ ಕವನ ವಾಚಿಸಿದರು. ರವೀಶ್ ಪಿಂಗಾರ ಸ್ಟುಡಿಯೋ ಛಾಯಾಗ್ರಹಣ ಹಾಗೂ ಮನೋಜ್ ವೀಡಿಯೋ ಚಿತ್ರೀಕರಣ ಮಾಡಿದರು. ಮೈಸೂರು ಯೂನಿವರ್ಸಿಟಿ ಪ್ರೊಫೆಸರ್ ಡಾ. ಚಂದ್ರಶೇಕರ್ ಮತ್ತು ಊರಿನ ಪ್ರಮುಖರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕರಾದ ಸುರೇಶ್ ಭಟ್, ರಾಧಾಕೃಷ್ಣ ಬೋರ್ಕರ್ ಮತ್ತಿತರು ಉಪಸ್ಥಿತರಿದ್ದರು.
