ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಹಪ್ರಾಧ್ಯಾಪಕರಾದ ಮಾಧವ ಎಂ.ಕೆ. “ವೃತ್ತಿಜೀವನದ ಏಳುಬೀಳುಗಳನ್ನು ಸಹಸಿಕೊಂಡು ಮುನ್ನಡೆಯಲು ನೃತ್ಯ ಸಂಗೀತದಂತಹ ಕಲೆಗಳು ನೆರವಾಗುತ್ತವೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳನ್ನು ದೂರ ಇಡುವುದಕ್ಕೆ ಈ ಕಲಾಪ್ರಕಾರಗಳು ನೆರವಾಗುತ್ತವೆ. ಅಲ್ಲದೆ ಡಿಪ್ರೆಷನ್ ಮುಂತಾದ ಅನೇಕ ರೀತಿಯ ಸಮಸ್ಯೆಗಳಿಗೆ ಸಂಗೀತ ನೃತ್ಯದಂತಹ ಕಲಾಪ್ರಕಾರಗಳು ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ವೇಗವಾಗಿ ಸಾಗುತ್ತಿರುವ ಈ ಕಾಲಮಾನದಲ್ಲಿ ಜೀವನ ಸೌಂದರ್ಯದ ಆಸ್ವಾದನೆಗೆ ಈ ರೀತಿಯ ಹವ್ಯಾಸಗಳು ಸದಾ ಸಹಕಾರಿ ಆಗಿರುತ್ತವೆ” ಎಂದು ಹೇಳಿದರು.



ಸಮಾರಂಭದಲ್ಲಿ 2024–2025ನೇ ಸಾಲಿನಲ್ಲಿ ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ವತಿಯಿಂದ ನಡೆದ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ಪ್ರದಾನ ಮಾಡಲಾಯಿತು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿಯವರು ಸ್ವಾಗತಿಸಿದರು. ನೃತ್ಯಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯರಿಂದ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮ ಪ್ರಸ್ತುತಗೊಂಡಿತು.



