ಮಂಗಳೂರು : ಅಲೆವೂರಾಯ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ದಿ. ಲಕ್ಷ್ಮೀನಾರಾಯಣ ಅಲೆವೂರಾಯರ ಸಂಸ್ಮರಣೆ ಪ್ರಯುಕ್ತ ಆಯೋಜಿಸಲಾದ ‘ಯಕ್ಷ ತ್ರಿವೇಣಿ’ಯ ಸಮಾರೋಪ ಸಮಾರಂಭವು ದಿನಾಂಕ 27 ಡಿಸೆಂಬರ್ 2025ರಂದು ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಕಲ್ಕೂರ ಪ್ರತಿಷ್ಥಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ್ ಕಲ್ಕೂರರು “ಯಕ್ಷಗಾನವು ಒಂದು ಸೀಮಿತ ವಲಯಕ್ಕೆ ಅಥವಾ ವರ್ಗಕ್ಕೆ ಮೀಸಲಾಗಿಲ್ಲ. ಕಲಾ ವಲಯವೇ ಇಂದು ಯಕ್ಷಗಾನದತ್ತ ಆಕರ್ಷಿತವಾಗಿದೆ. ನಮ್ಮ ಕರಾವಳಿಯಲ್ಲಂತೂ ಯಕ್ಷಗಾನವಿಲ್ಲದೆ ಕಾರ್ಯಕ್ರಮಗಳಿರುವುದು ಅಪರೂಪ. ಇಂತಹ ಒಂದು ಬಹುಮಾನ್ಯ ಕಲೆ ಕನ್ನಡವನ್ನು ಉಳಿಸುತ್ತಾ ಸಾಂಸ್ಕೃತಿಕ ನೆಲೆಗಟ್ಟನ್ನು ಭದ್ರಪಡಿಸುತ್ತಾ ಬರುತ್ತಿದೆ. ಸಂಘಟಕರ ಶ್ರಮ ಎದ್ದು ಕಾಣುತ್ತದೆ” ಎಂದು ಹೇಳಿದರು.
ಅಲೆವೂರಾಯ ಪ್ರತಿಷ್ಠಾನದ ಗೌರವ ಸಂಚಾಲಕರಾದ ಡಾ. ಹರಿಕೃಷ್ಣ ಪುನರೂರು ಇವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘಟಕ ಹಾಗೂ ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಕಬೈಲು ಸತೀಶ ಅಡಪರನ್ನು ಸನ್ಮಾನಿಸಲಾಯಿತು. ಕೆರೆಮನೆ ನರಸಿಂಹ ಹೆಗಡೆ, ಗೌತಮ್ ಭಂಡಾರಿ, ಸುಭದ್ರಾ ದೇವಿ ಅತಿಥಿಗಳಾಗಿದ್ದರು. ಅಲೆವೂರಾಯ ಸಹೋದರರು ನಿರ್ವಹಿಸಿ, ಧನ್ಯವಾದವಿತ್ತರು. ನಿವೃತ್ತ ಅಧ್ಯಾಪಕ ಸುಧಾಕರ ರಾವ್ ಪೇಜಾವರ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಏಕಾದಶೀ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.
