ಬದಿಯಡ್ಕ : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ವೈದಿಕ ತಾಂತ್ರಿಕ ವಿದ್ಯಾಪೀಠದ ನಾಲ್ಕು ದಿವಸಗಳ ವಾರ್ಷಿಕೋತ್ಸವದ ಶುಭ ಸಮಾರಂಭವು ದಿನಾಂಕ 25 ಡಿಸೆಂಬರ್ 2025ರಂದು ಜರಗಿತು. ಬೆಳಗ್ಗೆ ಬ್ರಹ್ಮಶ್ರೀ ಅನಂತ ಭಟ್ ಚೂರಿಕ್ಕೋಡು ಇವರಿಂದ ಶ್ರೀ ಮಹಾಗಣಪತಿ ಹೋಮ, ಬ್ರಹ್ಮಶ್ರೀ ರಾಧೇಶ್ಯಾಮ್ ಪರಂಬರ ಇವರಿಂದ ಲಕ್ಷಾರ್ಚನೆ ಸೇವೆ, ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಇವರಿಂದ ಚಕ್ರಾಬ್ಜ ಪೂಜೆ ಹಾಗೂ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಇವರಿಂದ ನವಗ್ರಹ ಪೂಜೆ ಮುಂತಾದ ವೈದಿಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನೆರವೇರಿತು. ನವಗ್ರಹ ಪೂಜಾ ವಿಧಿಯ ಸಂದರ್ಭದಲ್ಲಿ ವೀಣಾವಾದಿನಿಯ ಸಂಸ್ಥಾಪಕರೂ ಗುರುಗಳೂ ಆದ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮತ್ತು ಶಿಷ್ಯವೃಂದದವರಿಂದ ನವಗ್ರಹ ಕೃತಿಗಳ ಆಲಾಪನೆಯು ವಿಶೇಷ ಆಕರ್ಷಣೆಯಾಗಿತ್ತು. ಹಾಡುಗಾರಿಕೆಗೆ ವಯಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಚೇರ್ತಲ ಕೃಷ್ಣ ಕುಮಾರ್ ಸಹಕರಿಸಿದರು.

ವಾರ್ಷಿಕೋತ್ಸವದ ಎರಡನೆಯ ದಿನದ ಕಾರ್ಯಕ್ರಮವು ದಿನಾಂಕ 26 ಡಿಸೆಂಬರ್ 2025ರಂದು ಪೂರ್ವಾಹ್ನ ಘಂಟೆ 6-30ಕ್ಕೆ ಮಹಾಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡು ಘಂಟೆ 9-30ಕ್ಕೆ ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ವಾರ್ಷಿಕೋತ್ಸವದ ಉದ್ಘಾಟನೆಯು ನಡೆಯಿತು. ಸ್ವಾಮೀಜಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ “ಇಂದಿನ ತಲೆಮಾರಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಸಂಪ್ರದಾಯ ಬದ್ಧವಾಗಿ ನೀಡುತ್ತಿರುವ ವೀಣಾವಾದಿನಿ ಸಂಸ್ಥೆಯನ್ನು ಶ್ಲಾಘಿಸಿದರಲ್ಲದೆ ಸಂಗೀತದ ಜೊತೆಗೆ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವ ಈ ಶಿಕ್ಷಣ ಸಂಸ್ಥೆ ಕಾಸರಗೋಡಿನಲ್ಲಿ ಅದ್ದಿತೀಯವಾದದ್ದು” ಎಂದು ವರ್ಣಿಸಿದರು.


ವೇದಿಕೆಯಲ್ಲಿ ಆಲ್ವಾಯಿಯ ತಾಂತ್ರಿಕ ವಿದ್ಯಾಪೀಠದ ಪ್ರಾಂಶುಪಾಲರಾದ ಪೈರುಪುಣಿ ಬಾಲಕೃಷ್ಣ ಭಟ್, ಬ್ರಹ್ಮಶ್ರೀ ಮುಲ್ಲಪಲ್ಲಿ ಕೃಷ್ಣನ್ ನಂಬುದಿರಿ, ಬದಿಯಡ್ಕದ ವೈದ್ಯ ಡಾ. ಶ್ರೀನಿಧಿ ಸರಳಾಯ ಹಾಗೂ ಕೌಮುದಿ ನೇತ್ರಾಲಯ ಬೇಳ ಇಲ್ಲಿನ ನೇತೃ ತಜ್ಞ ಡಾ. ಸುನಿಲ್ ಮತ್ತು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಪದ್ಮರಾಜ ಪಟ್ಟಾಜೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜಾರಾಮ್ ಪೆರ್ಲ ನಿರ್ವಹಿಸಿದರು. ಸಂಗೀತ ವಿದ್ಯಾರ್ಥಿಗಳ ಬಗ್ಗೆ ಸಂಚಾಲಕರಾದ ಯೋಗೀಶ ಶರ್ಮ ಇವರು ಪರಿಚಯಾತ್ಮಕವಾಗಿ ಮಾತನಾಡಿದರು. ಶ್ರೀಹರಿ ನೀಲಂಗಳ ವಂದಿಸಿದರು. ಬಳಿಕ ವಿವಿಧ ವಾದ್ಯವಾದನಗಳ ಸಾಂಗತ್ಯದಲ್ಲಿ ಸಮನ್ವಯ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮವು ಜರಗಿತು. ಮಾಸ್ಟರ್ ಶ್ರೀಶಂಕರನ್ ಮಳ್ಳಿಯೂರು ಇವರು ವಿವಿಧ ವಾದ್ಯ ವಾದನಗಳ ವಾದನದ ಮೂಲಕ ನೆರೆದಿದ್ದವರ ಮನಸೂರೆಗೊಳಿಸಿದರು. ಬಳಿಕ ಸಾಯಂಕಾಲ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿಯವರ ನೇತೃತ್ವದಲ್ಲಿ ಮಹಾಶ್ರೀಚಕ್ರ ನವಾವರಣ ಪೂಜೆಯು ಜರಗಿತು ,ಈ ಸಂದರ್ಭದಲ್ಲಿ ನವಾವರಣ ಕೃತಿಗಳ ಆಲಾಪನೆಯು ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಹಾಗೂ ಶಿಷ್ಯ ವೃಂದದವರಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಮೂರನೆಯ ದಿನವಾದ ದಿನಾಂಕ 27 ಡಿಸೆಂಬರ್ 2025ರಂದು ಬೆಳಗ್ಗೆ 9-00 ಗಂಟೆಗೆ ದೀಪ ಪ್ರಜ್ವಲನವು ವೀಣಾವಾದಿನಿಯ ನಿರ್ದೇಶಕರಾದ ವಿದ್ವಾನ್ ಯೋಗೀಶ ಶರ್ಮ ಬಳ್ಳ ಪದವು, ಶ್ರೀಯುತ ವಸಂತ ಕುಮಾರ ಪೆರ್ಲ ಮತ್ತು ಆಲ್ವಾಯಿ ತಾಂತ್ರಿಕ ವಿದ್ಯಾಪೀಠದ ಪ್ರಾಂಶುಪಾಲರಾದ ಶ್ರೀಯುತ ಪೈರುಪುಣಿ ಬಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ವಿದ್ಯಾರ್ಥಿಗಳು ರಸಿಕಪ್ರಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಪರಾಹ್ನ ಗುರುಪೂಜಾ ಕಾರ್ಯಕ್ರಮದಲ್ಲಿ ಶ್ರೀಯುತ ಪೈರುಪುಣಿ ಬಾಲಕೃಷ್ಣ ಭಟ್ ಇವರಿಗೆ ವಿದ್ವಾನ್ ಯೋಗೀಶ ಶರ್ಮ ಬಳ್ಳ ಪದವು ಅವರು ಸಪತ್ನೀಕರಾಗಿ ಶ್ರೀ ರಾಧಾಕೃಷ್ಣ ಭಟ್ ಇವರ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಅವರಿಗೆ ಗುರು ಪೂಜೆಯ ಗೌರವವನ್ನು ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಯುತ ಜೀವಂಧರ ಕುಮಾರ್ ಮತ್ತು ಶ್ರೀಯುತ ಗೋವಿಂದರಾಜ್ ಭಟ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಲ್ಲಿ ಎಳೆವೆಯಲ್ಲಿಯೇ ಗುರುವಿನ ಅನುಭೂತಿಯನ್ನು ಮೂಡಿಸುವ ಅತ್ಯದ್ಭುತ ಕಾರ್ಯಕ್ರಮ ಇದಾಗಿತ್ತು. ಸಾಯಂಕಾಲ ಸ್ವರಾಂಜಲಿ, ದೆಹಲಿ ಪ್ರಾಯೋಜಿತ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನು ಖ್ಯಾತ ಕಲಾವಿದೆ ಶ್ರೀಮತಿ ನಿವೇದಿತಾ ಭಟ್ಟಾಚಾರ್ ಜೀ ನೆರವೇರಿಸಿದರು. ಇವರಿಗೆ ಸಿತಾರ್ ನಲ್ಲಿ ಸುಬ್ರತಾ ದೇ, ಹಾರ್ಮೋನಿಯಂನಲ್ಲಿ ಪಂಡಿತ್ ಹೇಮಂತ್ ಭಾಗವತ್, ತಬಲಾದಲ್ಲಿ ಖ್ಯಾತ ತಬಲಾ ಕಲಾವಿದೆ ರತ್ನಶ್ರೀ ಐಯ್ಯರ್ ಇವರು ಸಾಥ್ ನೀಡಿದರು. ರಾತ್ರೆ 7-00 ಗಂಟೆಗೆ ವಿದುಷಿ ಅನುಷಾ ಎ. ಬೆಂಗಳೂರು ಇವರಿಂದ ಭರತನಾಟ್ಯವು ನೆರವೇರುವುದರೊಂದಿಗೆ ಮೂರನೇ ದಿನದ ಕಾರ್ಯಕ್ರಮವು ಸುಸಂಪನ್ನಗೊಂಡಿತು.

ವಾರ್ಷಿಕೋತ್ಸವದ ಕೊನೆಯ ದಿನವಾದ 28 ಡಿಸೆಂಬರ್ 2025ರಂದು ಮುಂಜಾನೆ ಈಶ ಫೌಂಡೇಶನ್ ವತಿಯಿಂದ ಯೋಗಾಭ್ಯಾಸವು ನಡೆಯಿತು. ನಂತರ ವೀಣಾವಾದಿನಿಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಂದ ನಾದೋಪಾಸನಾ ಕಾರ್ಯಕ್ರಮವು ನಡೆಯಿತು. ಆಮೇಲೆ ನಡೆದ ಮುರಳೀರವಮ್ ನಲ್ಲಿ ಗುರುಗಳಾದ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಇವರು ವೀಣಾವಾದಿನಿಯ ವಿದ್ಯಾರ್ಥಿಗಳ ಜತೆಗೂಡಿ ಶ್ರೀ ಎಂ. ಬಾಲಮುರಳೀಕೃಷ್ಣ ಇವರು ರಚಿಸಿದ ಆಯ್ದ ಕೆಲವು ಮೇಳಕರ್ತ ಕೃತಿಗಳನ್ನು ಹಾಡಿದರು. ಈ ವರ್ಷದ ವೀಣಾವಾದಿನಿ ಪುರಸ್ಕಾರ ಪ್ರಧಾನ ಕಾರ್ಯಕ್ರಮವನ್ನು ಶ್ರೀ ಟಿ ಶ್ಯಾಮ್ ಭಟ್ ಇವರು ಉದ್ಘಾಟಿಸಿದರು. ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಅಮೃತ ಹಸ್ತದಿಂದ ಶ್ರೀ ಬಾಲಕೃಷ್ಣ ಕಮ್ಮತ್ ಮತ್ತು ಶ್ರೀ ಎಡಪ್ಪಳ್ಳಿ ಅಜಿತ್ ಕುಮಾರ್ ಇವರಿಗೆ ವೀಣಾವಾದಿನಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾದ ವೀಣಾವಾದಿನಿಯ ವಿದ್ಯಾರ್ಥಿನಿ ಶ್ರೀಮತಿ ಪಲ್ಲವಿ ರಾವ್ ಇವರನ್ನುಗೌರವಿಸಲಾಯಿತು. ನಮ್ಮ ಸಂಸ್ಥೆಗೆ ಉದಾರ ಧನ ಸಹಾಯ ನೀಡಿದ ಶ್ರೀ ಬಾಲಮುರಳಿ ಕೊಮುಂಜೆ ಇವರನ್ನು ಗೌರವಿಸಲಾಯಿತು. ಶ್ರೀ ರವೀಶ ತಂತ್ರಿ, ಶ್ರೀ ಎಚ್.ಎಸ್. ಭಟ್, ಶ್ರೀಮತಿ ಸುನಂದಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಮೀಜಿಯವರ ಆಶೀರ್ವಚನದ ನಂತರ ಖ್ಯಾತ ಕಲಾವಿದ ವಿದ್ವಾನ್ ಶ್ರೀ ಟಿ.ಎನ್.ಎಸ್. ಕೃಷ್ಣ ಮಧುರೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯು ನಡೆಯಿತು. ಮೃದಂಗಂನಲ್ಲಿ ವಿದ್ವಾನ್ ಶ್ರೀ ಬಾಲಕೃಷ್ಣ ಕಮ್ಮತ್, ಪಿಟೀಲಿನಲ್ಲಿ ಶ್ರೀ ಎಡಪಳ್ಳಿ ಅಜಿತ್ ಕುಮಾರ್, ಘಟಮ್ ನಲ್ಲಿ ಶ್ರೀ ತಿರುವನನಂತಪುರಂ ಆರ್. ರಾಜೇಶ್, ಖಂಜಿರದಲ್ಲಿ ಶ್ರೀ ವಿಷ್ಣು ವಿ. ಕಮ್ಮತ್ ಇವರು ಸಹಕರಿಸಿದರು. ಮಾಜಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಉಪಸ್ಥಿತಿಯಲ್ಲಿ ಧನ್ಯವಾದ ಸಮರ್ಪಣೆಯೊಂದಿಗೆ ವೀಣಾವಾದಿನಿಯ ನಾಲ್ಕು ದಿನಗಳ ವಾರ್ಷಿಕೋತ್ಸವ ವೇದ ನಾದ ಯೋಗ ತರಂಗಿಣಿಯು ಸುಸಂಪನ್ನಗೊಂಡಿತು.
