ಮಂಗಳೂರು : ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಆಯ್ಕೆಯಾಗಿದ್ದಾರೆ. ಅಕಾಡೆಮಿಯ ಸರ್ವ ಸದಸ್ಯರ ಸಭೆ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆದಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.
ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅವರ, ಸರ್ವಜ್ಞನ ವಚನಗಳ ಭಾಷಾಂತರವನ್ನೊಳಗೊಂಡ ‘ಜೀಯಸೆಲೆ’ ಬ್ಯಾರಿ ಕವನ ಸಂಕಲನ, ‘ಬ್ಯಾರಿ ಪಂಚತಂತ್ರ’ (ಪಂಚತಂತ್ರ ಕತೆಗಳ ಅನುವಾದ ಗ್ರಂಥ) ಮತ್ತು ‘ಸಾಧನೆಡೊ ಸರದಾರ ಅಭಿವೃದ್ಧಿರೊ ಕಿನಾವುಗಾರ ಸರ್. ಎಂ. ವಿಶ್ವೇಶ್ವರಯ್ಯ’ ಬ್ಯಾರಿ ಕೃತಿಗಳನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಕಾದಂಬರಿಗಾರ ನಿಯಾಝ್ ಪಡೀಲ್ ಅವರ ‘ಯತೀಮ್’ ಕನ್ನಡ ಕಾದಂಬರಿಯನ್ನು ಇವರು ಬ್ಯಾರಿ ಭಾಷೆಗೆ ಅನುವಾದಿಸಿದ್ದು ಇತ್ತೀಚೆಗೆ ಬಿಡುಗಡೆಗೊಂಡಿದೆ. ಕನಕದಾಸರ ಮುಂಡಿಗೆ ಮತ್ತು ಕೀರ್ತನೆಗಳನ್ನು ಕನ್ನಡದಿಂದ ಬ್ಯಾರಿಗೆ ಅನುವಾದಿಸಿದ್ದು, ಪ್ರಕಟಣೆಯ ಹಂತದಲ್ಲಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಹೊರತಂದ ಬ್ಯಾರಿ-ಕನ್ನಡ-ಇಂಗ್ಲೀಷ್ ನಿಘಂಟನ ಸಹಸಂಪಾದಕರಾಗಿ, ಬ್ಯಾರಿ-ಇಂಗ್ಲೀಷ್-ಕನ್ನಡ-ಹಿಂದಿ ಪದಕೋಶದ ಬ್ಯಾರಿ ಪದಗಳ ಸಂಗ್ರಾಹಕರಾಗಿ, ಬ್ಯಾರಿ ವ್ಯಾಕರಣ ಗ್ರಂಥದ ಸಂಪಾದಕರಾಗಿ, ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹೊರತಂದ ಬ್ಯಾರಿ-ಕನ್ನಡ ಗಾದೆ-ನುಡಿ-ಗಟ್ಟು-ಒಗಟುಗಳ ಕೋಶದ ಸಂಪಾದಕರಲ್ಲಿ ಓರ್ವರಾಗಿ ಕೆಲಸ ನಿರ್ವಹಿಸಿದ್ದಾರೆ. ‘ಲೋಕಾನುಗ್ರಹಿ ಹಜ್ರತ್ ಮುಹಮ್ಮದ್ ಪೈಗಂಬರ್’ ಮತ್ತು ‘ಬಕ್ರೀದ್’ ಇವರ ಪ್ರಕಟಿತ ಕನ್ನಡ ಕೃತಿಗಳು.
