ಮಂಗಳೂರು : ಕವಿತಾ ಟ್ರಸ್ಟ್ ನೀಡುವ 2025ನೇ ಸಾಲಿನ ‘ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ’ಗೆ ‘ವಲ್ಲಿ ವಗ್ಗ’ ಎಂಬ ಕಾವ್ಯನಾಮದಲ್ಲಿ ಬರೆಯುವ ವಲೇರಿಯನ್ ಡಿಸೋಜ ಇವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ರೂ.25,000/- ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ದಿನಾಂಕ 11 ಜನವರಿ 2026ರಂದು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯುವ 20ನೇ ಕವಿತಾ ಫೆಸ್ತ್ ಉತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕೊಂಕಣಿ ಬರಹಗಾರ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಣ್ಣ ಕಥೆಗಾರ ದಾಮೋದರ್ ಮಾವೊ ಇವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಕವಿತಾ ಟ್ರಸ್ಟಿನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿಯನ್ನು ಮಂಗಳೂರು ಬಳಿಯ ಕುಪ್ಪೆಪದವುವಿನ ಜೋಸೆಫ್ ಮಥಾಯಸ್ ಸ್ಥಾಪಿಸಿದ್ದು, ಇವರು ದುಬೈನ ಮೆರಿಟ್ ಫ್ರೈಟ್ ಸಿಸ್ಟಮ್ಸ್ ಎಲ್‌ಎಲ್‌ಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಪ್ರಶಸ್ತಿಯನ್ನು ಇಲ್ಲಿಯವರೆಗೆ ಗೋವಾ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹದಿನೇಳು ಕವಿಗಳಿಗೆ ನೀಡಲಾಗಿದೆ. ವಲ್ಲಿ ವಗ್ಗ 18ನೇ ಪ್ರಶಸ್ತಿ ವಿಜೇತರಾಗಿದ್ದಾರೆ.
ಬಂಟ್ವಾಳ ತಾಲೂಕಿನವರಾದ ವಲೇರಿಯನ್ ಡಿಸೋಜ ಇವರು ನೂರಾರು ಕತೆ, ಕವನಗಳನ್ನು ರಚಿಸಿದ್ದಾರೆ. ಇವರು ಒಬ್ಬ ಬರಹಗಾರರಷ್ಟೇ ಅಲ್ಲ, ಕೊಂಕಣಿ ಭಾಷೆಯ ಉತ್ಸಾಹಿ ಕಾರ್ಯಕರ್ತರೂ ಆಗಿದ್ದಾರೆ. ಮೈಸೂರಿನಲ್ಲಿ ಸ್ಥಾಪಿಸಲಾದ ಕೊಂಕಣಿ ಕ್ರಿಶ್ಚಿಯನ್ ಸಂಘದ ಮೊದಲ ಜಂಟಿ ಕಾರ್ಯದರ್ಶಿ, ಆರು ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿಯೂ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕೊಂಕಣಿ ಕುಟಮ್ ಬಾಹ್ರೇನ್ ಪ್ರಶಸ್ತಿ, ದಾಯ್ಜಿ ದುಬಾಯ್ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ವಲ್ಲಿ ವಗ್ಗ ಭಾಜನರಾಗಿದ್ದಾರೆ.
