ಮೈಸೂರು : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮೈಸೂರು ರಂಗಾಯಣದ ಪ್ರತಿಷ್ಠಿತ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ವನ್ನು ದಿನಾಂಕ 11ರಿಂದ 18 ಜನವರಿ 2026ರವರೆಗೆ ಹಮ್ಮಿಕೊಳ್ಳಲಾಗಿದ್ದು, ದಿನಾಂಕ 12 ಜನವರಿ 2026ರಂದು ನಾಟಕೋತ್ಸವವನ್ನು ಸಿ.ಎಂ. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
‘ಬಾಬಾ ಸಾಹೇಬ್’ ಸಮತೆಯೆಡೆಗೆ ನಡಿಗೆ ಆಶಯದಡಿ ನಾಟಕೋತ್ಸವ ನಡೆಯುವುದರಿಂದ ನಾಟಕ, ಸಂಗೀತ, ಜಾನಪದ, ಕಲೆ, ಚಲನಚಿತ್ರಗಳಲ್ಲಿ ಅಂಬೇಡ್ಕರರ ಸಮಗ್ರ ವ್ಯಕ್ತಿತ್ವ ಪ್ರದರ್ಶನವಾಗಲಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದ್ದಾರೆ. ಮೈಸೂರು ರಂಗಾಯಣದಲ್ಲಿ 2001ರಿಂದ ಆರಂಭವಾದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈಗ ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದ್ದು, ‘ಬೆಳ್ಳಿ ಬಹುರೂಪಿ ರಂಗ ಗೌರವ’ವನ್ನು ದೇಶದ ರಂಗಭೂಮಿಯ ಹೆಸರಾಂತ ಹಿರಿಯ ನಟಿ ಅಸ್ಸಾಂನ ಹೈಸ್ಲಾಂ ಸಾಬಿತ್ರಿ ಇವರಿಗೆ ನೀಡಲಾಗುತ್ತಿದೆ.
‘ಬಹುರೂಪಿ ಬಾಬಾ ಸಾಹೇಬ್ – ಸಮತೆಯೆಡೆಗೆ ನಡಿಗೆ’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು 17 ಮತ್ತು 18 ಜನವರಿ 2026ರಂದು ಕಿರುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಟಕೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ತಮಿಳುನಾಡು, ಅಸ್ಸಾಂ, ಕೇರಳ ರಾಜ್ಯಗಳ ಒಟ್ಟು 24 ನಾಟಕಗಳು ಪ್ರದರ್ಶನಗೊಳ್ಳಲಿವೆ.

