ಮಂಜೇಶ್ವರ : ಕಲಾಕುಂಚ ಕಾಸರಗೋಡು ಶಾಖೆಯ ವಾರ್ಷಿಕೋತ್ಸವವು ಕುಂಜತ್ತೂರಿನ ವೈಶಾಲಿ ಮನೆಯ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ದಿನಾಂಕ 04 ಜನವರಿ 2026ರಂದು ಶ್ರೀ ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಜರಗಿತು.
ಕಾರ್ಯಕ್ರಮವನ್ನು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶಿವಶಂಕರ ಉದ್ಘಾಟಿಸಿ, “ಆಧುನಿಕ ಮಾಧ್ಯಮಗಳು ನೀಡುವ ಮನರಂಜನೆಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿ ಕಲಾಕುಂಚ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳಿಂದ ಯುವ ಪೀಳಿಗೆ ಮೌಲ್ಯಯುತ ಬದುಕನ್ನು ಹಾಗೂ ಸಾಹಿತ್ಯ ಆಸಕ್ತಿಯನ್ನು ಮೂಡಿಸಿಕೊಳ್ಳಲು ಸಾಧ್ಯವಾಗುತ್ತಿರುವುದು ಶ್ಲಾಘನೀಯ” ಎಂದರು.

ಅತಿಥಿಯಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀರ ಅಡಪ ಸಂಕಬೈಲು ಮಾತನಾಡಿ ಕಲಾಕುಂಚದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಅಕಾಡೆಮಿ ಮೂಲಕ ಯಥಾಸಾಧ್ಯ ಸಹಕಾರ ನೀಡುವುದಾಗಿ ನುಡಿದರು. ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ವಹಿಸಿದ್ದರು. ಕಲಾಕುಂಚದ ಗೌರವಾಧ್ಯಕ್ಷ, ನಿವೃತ್ತ ಅಧ್ಯಾಪಕ ಸಾಹಿತಿ ವಿ.ಬಿ. ಕುಳಮರ್ವ, ಸಾಹಿತಿ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪ್ರೊ. ಪಿ.ಎನ್. ಮೂಡಿತ್ತಾಯ ಉಪಸ್ಥಿತರಿದ್ದರು. ಕಾರ್ತಿಕ್ ಪಡ್ರೆ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಕಲಾಕುಂಚ ಕೇರಳ ಶಾಖೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ರಾಧಾಮಣಿ ರಾವ್ ಮೀಯಪದವು ಹಾಗೂ ಕಾರ್ಯದರ್ಶಿಯಾಗಿ ಜಯಲಕ್ಷ್ಮೀ ಹೊಳ್ಳ ಉಪ್ಪಳ ಇವರನ್ನು ಆರಿಸಲಾಯಿತು.

ಈ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಮೀಯಪದವು ಇವರು ಪಾರ್ತಿಸುಬ್ಬನ ಕೃತಿಯ ‘ಹೊಳಹುಗಳು’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಪ್ರಸಂಗ ಸಾಹಿತ್ಯದ ಸರಳ ಹಾಗೂ ಸಂಕೀರ್ಣತೆ, ಬಹುಭಾಷಾ ಬಳಕೆ, ಯುಕ್ತನಾಣ್ಣುಡಿ, ಅರ್ಥಗಾರಿಕೆಯ ಸಾಧ್ಯತೆಗಳು ಮುಂತಾದ ವಿಚಾರಗಳ ಕುರಿತು ಬೆಳಕು ಚೆಲ್ಲಿದರು. ಬಳಿಕ ಪಾರ್ತಿಸುಬ್ಬನ ಕೃತಿಗಳಿಂದ ಆಯ್ದ ಕೆಲವು ಹಾಡುಗಳನ್ನು ರಾಜಾರಾಮ ಹೊಳ್ಳ ಕೈರಂಗಳ ಇವರು ಭಾಗವತಿಕೆ ಮೂಲಕ ಪ್ರಸ್ತುತಪಡಿಸಿದರು. ಶ್ರೀ ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಅಧ್ಯಕ್ಷೆ ಜಯಶೀಲಾ ಸ್ವಾಗತಿಸಿ, ರಾಧಾಮಣಿ ರಾವ್ ವಂದಿಸಿ, ಜಯಲಕ್ಷ್ಮೀ ಹೊಳ್ಳ ನಿರೂಪಿಸಿದರು. ಸಂಗೀತ ಶಿಕ್ಷಕಿ ರಾಜೇಶ್ವರಿ ಪ್ರಾರ್ಥಿಸಿದರು. ಶ್ರೀ ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಕಲಾಲಯದ ವಿದ್ಯಾರ್ಥಿಗಳು, ಕಲಾ ಕುಂಚದ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಜರಗಿದವು. ದಿವ್ಯಾ ಕಾರಂತ ನಿರೂಪಿಸಿದರು.

