ಮಂಗಳೂರು : ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ ನೀಡುವ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ಗೆ ಏಳು ಮಂದಿ ಸಾಧಕರು ಹಾಗೂ ಒಂದು ಸಂಸ್ಥೆ ಆಯ್ಕೆಯಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ ಕನ್ನಪ್ಪ ಫರ್ನಾಂಡಿಸ್ ತಿಳಿಸಿದ್ದಾರೆ.
ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ (ಕನ್ನಡ ಸಾಹಿತ್ಯ), ಪ್ಯಾಟ್ರಿಕ್ ಕಾಮಿಲ್ ಮೋರಾಸ್ (ಕೊಂಕಣಿ ಸಾಹಿತ್ಯ), ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ (ತುಳು ಸಾಹಿತ್ಯ), ಪತ್ರಕರ್ತೆ ತುಂಗ ರೇಣುಕ (ಮಾಧ್ಯಮ), ಸೈಮನ್ ಪಾಯ್ಸ್ (ಕೊಂಕಣಿ ಸಂಗೀತ), ಶ್ರೀನಿವಾಸ ಜಿ. ಕಪ್ಪಣ್ಣ (ಕಲೆ), ಡಾ. ದತ್ತಾತ್ರೇಯ ಅರಳಿಕಟ್ಟೆ (ಶಿಕ್ಷಣ) ಹಾಗೂ ವಿಶೇಷ ಪ್ರಶಸ್ತಿಗೆ ಬಳ್ಳಾರಿಯ ನವಜೀವನ ರಿಹ್ಯಾಬಿಲಿಟೇಶನ್ ಸೆಂಟರ್ ಫಾರ್ ಡಿಸೇಬಲ್ಡ್ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.
ಸಂದೇಶ ಪ್ರತಿಷ್ಠಾನ ಟ್ರಸ್ಟಿ ರಾಯ್ ಕ್ಯಾಸ್ಟಲಿನೊ ಮಾತನಾಡಿ “ದಿನಾಂಕ 21 ಜನವರಿ 2026ರಂದು ಸಂಜೆ ಗಂಟೆ 5-30ಕ್ಕೆ ಪ್ರತಿಷ್ಠಾನದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಂಸ್ಥೆಯ ಅಧ್ಯಕ್ಷ ಬಳ್ಳಾರಿ ಬಿಷನ್ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅಧ್ಯಕ್ಷತೆ ವಹಿಸುವರು. ನಟ, ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್‌ಪೌಲ್ ಸಲ್ದಾನಾ, ಉಡುಪಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಪ್ಯಾನಿ ಅಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಕರ್ನಾಟಕ – ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಈ ಅಧ್ಯಕ್ಷೆ ಶಾಲೆಟ್ ಲವಿನಾ ಪಿಂಟೊ, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಭಾಗವಹಿಸಲಿರುವರು” ಎಂದರು.
ಪ್ರತಿಷ್ಠಾನ ನಿರ್ದೇಶಕ ವಂದನೀಯ ಸುದೀಪ್ ಪೌಲ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ರೂಪಕಲಾ ಆಳ್ವ, ಬಿ.ಎ. ಮೊಹಮ್ಮದ್ ಹನೀಫ್ ಉಪಸ್ಥಿತರಿದ್ದರು.
