ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ. ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ. ವಸಂತರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 22 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. 2025-26ನೇ ಸಾಲಿನ 23ನೇ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದಾಗ 10 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು.
ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ ಶ್ರೀಮತಿ ಪೂಜಾರಿರ ಕೃಪಾ ದೇವರಾಜ್ ಇವರು ರಚಿಸಿದ ‘ಮಂತ್ರ ಪುಷ್ಪ’ -ಕಥೆಗಳ ಕ್ಯಾನ್ವಾಸ್ ಕೃತಿಗೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.
ಸಾಹಿತಿ ಮತ್ತು ಕವಿಯತ್ರಿಯಾಗಿರುವ ಶ್ರೀಮತಿ ಪೂಜಾರಿರ ಕೃಪಾ ದೇವರಾಜ್ ರವರು ‘ಭಾವದ ಕದತಟ್ಟಿ’ – ಕವನ ಸಂಕಲನ, ‘ಮರ್ಮರ’ ಕಥಾ ಸಂಕಲನ (ಆಜೂರ ಪ್ರತಿಷ್ಠಾನದ ಪ್ರತಿಷ್ಠಿತ ರಾಜ್ಯ ಮಟ್ಟದ ಆಜೂರ ಪ್ರಶಸ್ತಿ ದೊರಕಿದೆ), ‘ಚೌಚೌ ಬಾತ್’ – ಲಲಿತ ಪ್ರಬಂಧಗಳ ಸಂಕಲನ, ‘ಕಾರ್ಪಣ್ಯದ ಹೂವು’ – ಕವನ ಸಂಕಲನ, ‘ಮಂತ್ರ ಪುಷ್ಪ’ – ಕಥಾ ಸಂಕಲನ ಸೇರಿ ಐದು ಕೃತಿಗಳನ್ನು ರಚಿಸಿರುತ್ತಾರೆ. ಹಲವಾರು ಕವಿತೆಗಳನ್ನು ಕವಿಗೋಷ್ಠಿಗಳಲ್ಲಿ ವಾಚಿಸಿ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ತೀರ್ಪುಗಾರರು ಕಳುಹಿಸಿದ ಅಂಕಿ ಪಟ್ಟಿಯನ್ನು ಗೌರವ ಕಾರ್ಯದರ್ಶಿಗಳಾದ ಮುನಿರ್ ಅಹಮದ್, ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ನಿರ್ದೇಶಕರಾದ ಸಂಜೀವ ಜೋಶಿಯವರು ಉಪಸ್ಥಿತರಿದ್ದ ಸಭೆಯಲ್ಲಿ ಪರಮರ್ಷಿಸಿ ಅಂಕಗಳನ್ನು ಒಟ್ಟುಗೂಡಿಸಿ ಹೆಚ್ಚಿನ ಅಂಕ ಪಡೆದ ಶ್ರೀಮತಿ ಕೃಪಾ ದೇವರಾಜ್ ರವರ ‘ಮಂತ್ರ ಪುಷ್ಪ’ ಕೃತಿಯನ್ನು ಆರಿಸಲಾಯಿತು.
