ಧಾರವಾಡ : ಕನ್ನಡದ ಆದ್ಯ ನಾಟಕಕಾರ, ಕವಿ, ಕೀರ್ತನಕಾರ, ಕನ್ನಡದ ಕಟ್ಟಾಳು ‘ಶಾಂತಕವಿ ಸಕ್ಕರಿ ಬಾಳಾಚಾರ್ಯ’ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಆಶಯದೊಂದಿಗೆ ಹಾಗೂ ಕನ್ನಡ ರಂಗಭೂಮಿಯಲ್ಲಿ ಅತ್ಯುತ್ತಮವೆನಿಸಬಹುದಾದ ಹೊಸ ನಾಟಕ ಕೃತಿಗಳು ಬರುತ್ತಿಲ್ಲದಿರುವುದನ್ನು ಮನಗಂಡು ನಾಟಕಕಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಉತ್ತಮ ನಾಟಕಗಳನ್ನು ಪ್ರಕಟಿಸಿ ರಂಗದ ಮೇಲೆ ತರುವ ಸದುದ್ದೇಶದಿಂದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ (ರಿ.) ಧಾರವಾಡ ಇವರು ಶಾಂತಕವಿ ಸಕ್ಕರಿ ಬಾಳಾಚಾರ್ಯ ‘ಶಾಂತರಂಗ’ ನಾಟಕಕಾರ ಪ್ರಶಸ್ತಿಯನ್ನು ಸ್ಥಾಪಿಸಿ ಪ್ರತಿ ವರುಷ ಕನ್ನಡದ ಅತ್ಯುತ್ತಮ ನಾಟಕ ರಚನಕಾರರಿಗೆ ಪ್ರಶಸ್ತಿಯನ್ನು ಕೊಡಲು ನಿರ್ಧರಿಸಿದೆ.
2025ನೇ ಸಾಲಿನ ಪ್ರಶಸ್ತಿಗಾಗಿ ಆಗಸ್ಟ್ ತಿಂಗಳಿನಲ್ಲಿ ನಾಟಕ ರಚನಾಕಾರರಿಂದ ಹಸ್ತಪ್ರತಿಗಳನ್ನು ಆಹ್ವಾನಿಸಿ ಅತ್ಯುತ್ತಮ ನಾಟಕ ಪ್ರಶಸ್ತಿಗೆ ರೂ.15,000/- ಜೊತೆಗೆ ಶಾಂತಕವಿಗಳ ಸ್ಮರಣಿಕೆ, ಶಾಲು, ಹಾರ, ಫಲ ತಾಂಬೂಲ ಮತ್ತು ಪ್ರಶಸ್ತಿ ಪತ್ರವನ್ನು ಕೊಡಲಾಗುವುದೆಂದು ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ನಾಟಕ ಕೃತಿಗಳಿಗೆ ಧಾರವಾಡದ ಅಭಿನಯ ಭಾರತಿ ಸಂಸ್ಥೆ ವತಿಯಿಂದ ತಲಾ ರೂ.2,500/-ಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದೆಂದು ಪ್ರಕಟಿಸಲಾಗಿತ್ತು. ಜನವರಿ ತಿಂಗಳ ಕೊನೆಯ ವಾರದಲ್ಲಿ ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಪ್ರಶಸ್ತಿಗಾಗಿ ಒಟ್ಟು 22 ಕೃತಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ ನಮ್ಮ ಸಂಸ್ಥೆಯು ನಿಗದಿ ಪಡಿಸಿದ ಮಾನದಂಡಗಳನ್ನು ಪೂರೈಸಿದ 19 ಕೃತಿಗಳನ್ನು ಪರಿಶೀಲಿಸಿ ಪ್ರಶಸ್ತಿಗಾಗಿ ಶಿಪಾರಸ್ಸು ಮಾಡಲು ಧಾರವಾಡದ ಅಭಿನಯ ಭಾರತಿ ಅಧ್ಯಕ್ಷರಾದ ಅರವಿಂದ ಕುಲಕರ್ಣಿ, ಧಾರವಾಡ ಆಕಾಶವಾಣಿಯ ಉದ್ಘೋಷಕರಾದ ಶಶಿಧರ ನರೇಂದ್ರ ಹಾಗೂ ರಾಯಚೂರು ನಿವೃತ್ತ ಆಕಾಶವಾಣಿ ಮುಖ್ಯಸ್ಥರಾದ ಬಿ.ಎಮ್. ಶರಬೇಂದ್ರಸ್ವಾಮಿ ಇವರುಗಳನ್ನೊಳಗೊಂಡ ಆಂತರಿಕ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಸದರಿ ಸಮಿತಿಯ ಸದಸ್ಯರು ಹಸ್ತಪ್ರತಿಗಳನ್ನು ಪರಿಶೀಲಿಸಿ 10 ಕೃತಿಗಳನ್ನು ಪ್ರಶಸ್ತಿಗಾಗಿ ಪರಿಗಣಿಸಬಹುದೆಂದು ಶಿಪಾರಸ್ಸು ಮಾಡಿರುತ್ತಾರೆ.
ಆಂತರಿಕ ಆಯ್ಕೆ ಸಮಿತಿಯ ಸದಸ್ಯರು ಸಲ್ಲಿಸಿರುವ 10 ಹಸ್ತ ಪ್ರತಿಗಳನ್ನು ಅಂತಿಮ ಆಯ್ಕೆ ಸಮಿತಿಯ ಸದಸ್ಯರುಗಳಾದ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಡಾ. ಬಸವರಾಜ ಡೋಣೂರ, ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕರಾದ ಡಾ. ವೆಂಕಟರಮಣ ಐತಾಳ ಹಾಗೂ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರುಗಳು ಹಸ್ತಪ್ರತಿಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡಿರುತ್ತಾರೆ. ಅವುಗಳ ವಿವರ ಈ ಕೆಳಕಂಡಂತಿದೆ.
ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾದ ನಾಟಕ ಕೃತಿ : ‘ಕಂಠಿಹಾರ’
ನಾಟಕ ರಚನಾಕಾರರ ಹೆಸರು : ಶ್ರೀ ಶಿರೀಷ್ ಜೋಶಿ ಬೆಳಗಾವಿ

ತೀರ್ಪುಗಾರರ ಮೆಚ್ಚುಗೆ ಪಡೆದ ಮೊದಲ ನಾಟಕ ಕೃತಿ : ‘ಅರ್ಧ ಸತ್ಯದ ಕಥೆ’
ನಾಟಕ ರಚನಾಕಾರರ ಹೆಸರು : ಶ್ರೀ ಈಶ್ವರ ಹತ್ತಿ ಕೊಪ್ಪಳ

ತೀರ್ಪುಗಾರರ ಮೆಚ್ಚುಗೆ ಪಡೆದ ಎರಡನೇ ನಾಟಕ ಕೃತಿ : ‘ಇರುವಂತ’
ನಾಟಕ ರಚನಾಕಾರರ ಹೆಸರು : ಎನ್. ಧೀರೇಂದ್ರ ಬೆಂಗಳೂರು

