ಮಂಗಳೂರು : ಪ್ರಸಿದ್ದ ಸಂಗೀತ ಸಂಸ್ಥೆ ಸ್ವರಲಯ ಸಾಧನಾ ಫೌಂಡೇಶನ್ ಹಾಗೂ ಕಲಾ ಶಾಲೆ ವತಿಯಿಂದ ದಿನಾಂಕ 14 ಜನವರಿ 2026ರಂದು ಮಂಗಳೂರಿನ ಪುರಭವನದಲ್ಲಿ ಆಯೋಜನೆಗೊಳ್ಳಲಿರುವ ಸ್ವರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಹಿಂದೂಸ್ಥಾನಿ ಗಾಯಕ, ಪದ್ಮಶ್ರೀ ಪಂಡಿತ್ ಅಜೋಯ್ ಚಕ್ರವರ್ತಿ ಇವರಿಂದ ‘ಸ್ವರ ಸಂಧ್ಯಾ’ ಸಂಗೀತ ಕಛೇರಿ ನಡೆಯಲಿದೆ.
ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಕಛೇರಿ ನಡೆಸಿಕೊಡಲಿರುವ ಪಂಡಿತ್ ಅಜೋಯ್ ಚಕ್ರವರ್ತಿ ಇವರಿಗೆ ಹಾರ್ಮೋನಿಯಂನಲ್ಲಿ ಅಜಯ್ ಜೋಗ್ಲೆಕರ್ ಮತ್ತು ತಬಲಾದಲ್ಲಿ ಇಶಾನ್ ಘೋಷ್ ಸಹಕರಿಸಲಿದ್ದಾರೆ. ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕುಮಾರ್ ಗಂಧರ್ವ ರಾಷ್ಟ್ರೀಯ ಪ್ರಶಸ್ತಿ, ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, 2012ರಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿಗಳು ಅಜೋಯ್ ಚಕ್ರವರ್ತಿ ಇವರಿಗೆ ಸಂದಿವೆ.
ಮಧ್ಯಾಹ್ನ 2-00 ಗಂಟೆಗೆ ಸ್ವರ ಸಂಕ್ರಾಂತಿ ಕಾರ್ಯಕ್ರಮ ಆರಂಭವಾಗಲಿದ್ದು, ಮೊದಲಿಗೆ ಕಲಾ ಶಾಲೆಯ 100ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ‘ಸ್ವರಲಯ ಸಿಂಫೋನಿ’ ವಯೋಲಿನ್ ಕಛೇರಿ ನಡೆಯಲಿದೆ. ಸಂಜೆ 4-00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5-00 ಗಂಟೆ ಬಳಿಕ ಪಂಡಿತ್ ಅಜೋಯ್ ಚಕ್ರವರ್ತಿ ಇವರ ‘ಸ್ವರ ಸಂಧ್ಯಾ’ ಕಛೇರಿ ನಡೆಯಲಿದೆ.
ಕಲಾಸಕ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, www.swaralayasadhanafoundation.org ವೆಬ್‌ಸೈಟ್‌ಗೆ ಭೇಟಿ ನೀಡಿ ಉಚಿತ ಪಾಸ್‌ಗೆ ನೋಂದಾಯಿಸಬಹುದು. ಪಾಸ್ ನೋಂದಾವಣೆ ಮಾಡಿದ ಕಲಾಸಕ್ತರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರಲಿದೆ ಎಂದು ಸ್ವರಲಯ ಸಾಧನಾ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿಶ್ವಾಸ್ ಕೃಷ್ಣ ಎಚ್. ತಿಳಿಸಿದ್ದಾರೆ.

