ಮಡಿಕೇರಿ : ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 09 ಫೆಬ್ರುವರಿ 2026ರಂದು ಐಗೂರು ಗ್ರಾಮದಲ್ಲಿ ನಡೆಯಲಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೋಮವಾರಪೇಟೆಯ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆಯಾಗಿದ್ದಾರೆ. ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಶ್ರೀಮತಿ ಜಲಜಾ ಶೇಖರ್ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಇಲ್ಲಿಯವರೆಗೆ ಏಳು ಪುಸ್ತಕಗಳನ್ನು ಇವರು ಹೊರತಂದಿದ್ದು ಇವರ ಎಂಟನೆಯ ಪುಸ್ತಕವು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ. ವಿಚಾರದೆಡೆಗೆ, ನೆಲಮುಗಿಲು, ಅಗ್ನಿಕುಂಡ, ಪ್ರತಿಕ್ಷ, ವಿಲೋಕನ ವೈಚಾರಿಕ ಲೇಖನಗಳು, ದೂರ ತೀರ ಯಾನ ಪ್ರವಾಸ ಕಥನ, ಕನ್ನಡಿಯ ಬಿಂಬ ಕೃತಿಗಳನ್ನು ರಚಿಸಿದ್ದಾರೆ.
ಶೈಕ್ಷಣಿಕ, ಸಾಹಿತ್ಯ ಅಲ್ಲದೆ ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ಸೋಮವಾರಪೇಟೆಯ ‘ಅಕ್ಕನ ಬಳಗ’ದ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೊಡಗು ಡಿ.ಸಿ.ಸಿ. ಬ್ಯಾಂಕ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರ ಮಂಡನೆ, ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಸನ್ಮಾನವನ್ನು ಪಡೆದುಕೊಂಡಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕೊಡಗು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್, ನಿರ್ದೇಶಕರಾದ ಸಂಜೀವ ಜೋಶಿ, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಗೌರವ ಕಾರ್ಯದರ್ಶಿಗಳಾದ ಎ.ಪಿ. ವೀರರಾಜು, ಕೆ.ಆರ್. ಜ್ಯೋತಿ ಅರುಣ್, ಕೋಶಾಧಿಕಾರಿ ಕೆ.ಪಿ. ದಿನೇಶ್, ಮಾಜಿ ಅಧ್ಯಕ್ಷ ಜೆ.ಸಿ. ಶೇಖರ್, ನಿಕಟ ಪೂರ್ವ ಅಧ್ಯಕ್ಷ ಜವರಪ್ಪ, ಐಗೂರು ಹೋಬಳಿ ಸಮಿತಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಉಪಸ್ಥಿತರಿದ್ದರು.
