ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನದಿಂದ ಮಂಗಳೂರಿನ ಪುರಭವನದಲ್ಲಿ ‘ಲಯ ಲಾವಣ್ಯ’ ಭಾರತೀಯ ತಾಳ ವಾದ್ಯಗಳ ವಿಶೇಷ ಕಾರ್ಯಕ್ರಮ ದಿನಾಂಕ 18 ಜನವರಿ 2026ರಂದು ನಡೆಯಿತು.

ಖ್ಯಾತ ಮೃದಂಗ ವಿದ್ವಾಂಸ ಆನೂರು ಆನಂತಕೃಷ್ಣ ಶರ್ಮಾ ಇವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ 11 ಮಂದಿ ಯುವ ಕಲಾವಿದರ ತಂಡದೊಂದಿಗೆ ಕಾರ್ಯಕ್ರಮ ಮೂಡಿಬಂತು. ಅವರು ಮೃದಂಗ, ಉಡುಕ್ಕೆ ದಮ್ಮಡಿ ಹಾಗೂ ಕರಟ ವಾದ್ಯಗಳ ಮೂಲಕ ಕಾರ್ಯಕ್ರಮಕ್ಕೆ ಲಯಾತ್ಮಕ ನೇತೃತ್ವ ನೀಡಿದರು. ಕರ್ನಾಟಕ ಶಾಸ್ತ್ರೀಯ, ಹಿಂದೂಸ್ತಾನಿ, ಜಾಜ್ ಹಾಗೂ ಪಾಶ್ಚಾತ್ಯ ಸಂಗೀತ ಶೈಲಿಗಳ ಸಮನ್ವಯದಲ್ಲಿ ಮೂಡಿಬಂದ ಲಯ ಲಾವಣ್ಯ ಕಾರ್ಯಕ್ರಮಕ್ಕೆ ಮೃದಂಗ, ಖಂಜಿರಿ, ಮೋರ್ಚಿಂಗ್, ಡೋಲು, ತಬ್ಲಾ ಸೇರಿದಂತೆ ನಾನಾ ಪರ್ಕಶನ್ ವಾದ್ಯಗಳ ಸಾಥ್ ಸುಂದರ ಸಂಗೀತ ಸಂಭ್ರಮಕ್ಕೆ ಮುನ್ನುಡಿ ಬರೆಯಿತು. ಕೊಳಲಿನಲ್ಲಿ ವಿದ್ವಾನ್ ರಾಜಕಮಲ್, ವಯೋಲಿನ್ ನಲ್ಲಿ ವಿದ್ವಾನ್ ಕೆ.ಜೆ. ದಿಲೀಪ್, ಖಂಜರಿ ಮತ್ತು ಫೋಮ್ ಡ್ರಮ್‌ನಲ್ಲಿ ಸುನಾದ್ ಆನೂರು, ಮೃದಂಗ, ಮದ್ದಳೆ ಹಾಗೂ ಶ್ರೀಖೋಲ್‌ನಲ್ಲಿ ನಾಗೇಂದ್ರ ಪ್ರಸಾದ್, ಫಟಂನಲ್ಲಿ ಫಣೀಂದ್ರ, ಮೋಚಿಂರ್ಗ್‌ನಲ್ಲಿ ಚಿದಾನಂದ, ಡಮ್ ನಲ್ಲಿ ಗೋಪಿ ಶ್ರವಣ್, ಬೇಸ್ ಟೇಪ್, ಚೆಂಡೆ ಮತ್ತು ಕಹೋನ್‌ನಲ್ಲಿ ಸುಮಧುರ ಆನೂರು, ಪಖಾವಜ್ ಮತ್ತು ಡೋಲಕ್‌ನಲ್ಲಿ ಆನೂರು ಪ್ರಬೋಧ ಶ್ಯಾಮ್, ತಬ್ಲಾದಲ್ಲಿ ಸುದತ್ತ, ತಬ್ಲಾ, ತಮಟೆ ಹಾಗೂ ನಾನಾ ಪರ್ಕಶನ್ ವಾದ್ಯಗಳಲ್ಲಿ ಆನೂರು ವಿನೋದ್ ಶ್ಯಾಮ್ ಸಹಕರಿಸಿದರು.


ಲಯ ಲಾವಣ್ಯ ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್ ಸಿ.ಜಿ.ಎಂ. ಚಂದ್ರಶೇಖರ ಮಯ್ಯ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್‌ನ ಆಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮಂಗಳೂರಿನ ರೀಜನಲ್ ಹೆಡ್ ವಿಶ್ವನಾಥ್ ಎಸ್.ಆರ್., ಸಂಗೀತ ಭಾರತಿ ಪ್ರತಿಷ್ಠಾನದ ಉಸ್ತಾದ್ ರಫೀಕ್ ಖಾನ್, ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಡಾ. ಉಷಾಪ್ರಭಾ ಎನ್. ನಾಯಕ್, ಮಣಿಕೃಷ್ಣ ಸ್ವಾಮಿ ಅಕಾಡೆಮಿ ಅಧ್ಯಕ್ಷರಾದ ನಿತ್ಯಾನಂದ ರಾವ್ ಉಪಸ್ಥಿತರಿದ್ದರು. ಪ್ರಾರಂಭದಿಂದ ಕೊನೆಯ ತನಕವೂ ನೆರೆದ ಶ್ರೋತೃವರ್ಗ ಮಂತ್ರಮುಗ್ಧರಾಗಿ ಭಾಗಿಗಳಾಗುವುದು ಕಾರ್ಯಕ್ರಮದ ಯಶಸ್ಸಿಗೆ ಹಿಡಿದ ಕನ್ನಡಿಯಂತಿತ್ತು.

