ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮಾಹೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವರ ಸಹಯೋಗದಲ್ಲಿ ದಿನಾಂಕ 17 ಜನವರಿ 2026ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ “ಸಂಶೋಧನೆ ಎಂದರೆ ಇರುವುದನ್ನೇ ಚಂದಮಾಡಿ ಬರೆಯುವುದಲ್ಲ, ಹಾಗೆ ಮಾಡಿದರೆ ಸಂಶೋಧನೆಯಲ್ಲಿ ಯಾವ ಸತ್ವವೂ ಇರುವುದಿಲ್ಲ. ಸಂಶೋಧನೆಯಲ್ಲಿ ಭಾಷೆಯ ಆಳಕ್ಕೆ ಇಳಿದು ಅರ್ಥದ ಅನುಸಂಧಾನ ನಡೆಯಬೇಕು. ಗೋವಿಂದ ಪೈ ಮುಳಿಯ ತಿಮ್ಮಪ್ಪಯ್ಯ, ಪಂಚಮಂಗೇಶ್ ರಾಯರು, ಸೇಡಿಯಾಪು ಕೃಷ್ಣಭಟ್ ಮೊದಲಾದವರು ಸಂಶೋಧನೆ ಮತ್ತು ಕಾವ್ಯ ಎರಡು ಕ್ಷೇತ್ರದಲ್ಲಿ ಸಮಾನವಾಗಿ ಕೆಲಸ ಮಾಡಿದ್ದಾರೆ. ಕರಾವಳಿ ಜಿಲ್ಲೆಯ ಲೇಖನಗಳಲ್ಲಿ ಮಣ್ಣಿನ ಸತ್ವವಿದೆ. ನೆಲದ ಮೂಲಕ ಕಾವ್ಯ ಕಟ್ಟಿದ್ದಾರೆ. ಆದರೆ ಯುವಜನತೆ ಮುಳಿಯ ತಿಮ್ಮಪ್ಪಯ್ಯ ಅವರ ಬಗ್ಗೆ ತಿಳಿಯುವ ಪ್ರಯತ್ನ ನಡೆಸುತ್ತಿಲ್ಲ. ಅವರ ಕುರಿತಾಗಿ ಓದಿಯೂ ಇಲ್ಲ. ಹೀಗಾಗಿ ಯುವ ಸಮುದಾಯಕ್ಕೆ ಅವರನ್ನು ಪರಿಚಯಿಸುವ ಕಾರ್ಯ ಮಾಡಬೇಕು. ಸರಕಾರದ ಅನುದಾನದ ಮೂಲಕ ಚದುರಿ ಹೋಗಿರುವ ಅವರ ಅನೇಕ ಕೃತಿಗಳನ್ನು ಒಟ್ಟುಗೂಡಿಸಿ ಸಮಗ್ರ ಸಂಪುಟ ಹೊರತರಬೇಕು” ಎಂದು ಹೇಳಿದರು.


ಡಾ. ಗಿರಿಜಾ ಶಾಸ್ತ್ರಿಯವರು ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ ಸ್ವೀಕರಿಸಿ ತಮ್ಮ ಸಂಶೋಧನೆಯ ಬಗ್ಗೆ ತಿಳಿಸಿದರು. ನಿವೃತ್ತ ಪ್ರಾಧ್ಯಾಪಿಕೆ ಡಾ. ಸರಸ್ವತಿ ಕುಮಾರಿ ಅಭಿನಂದನಾ ಭಾಷಣ ಮಾಡಿದರು. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಡಾ. ನಾ. ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು. ಮುಳಿಯ ತಿಮ್ಮಪ್ಪಯ್ಯ ಅವರ ಮಕ್ಕಳಾದ ಮುಳಿಯ ಗೋಪಾಲಕೃಷ್ಣ ಭಟ್ ಹಾಗೂ ಮುಳಿಯ ರಾಘವಯ್ಯ ಮತ್ತು ಅವರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರಂಭದಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ನಾರಾಯಣ ಶಬರಾಯ ಯಕ್ಷ ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಎಂ.ಜಿ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಮುಳಿಯ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿಯಾದ ಡಾ. ನರಸಿಂಹ ಮೂರ್ತಿ ವಂದಿಸಿದರು.
