ಮಂಗಳೂರು : ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ’ಗೆ ಯಕ್ಷರಂಗದ ಅಗ್ರಮಾನ್ಯ ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು ಮತ್ತು ರಂಗಭೂಮಿ ಕಲಾವಿದರಿಗೆ ನೀಡಲಾಗುವ ‘ಶ್ರೀ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ಗೆ ಈ ಬಾರಿ ನಟ ಉಮೇಶ್ ಮಿಜಾರು ಇವರುಗಳು ಆಯ್ಕೆಯಾಗಿದ್ದಾರೆ.
ಶ್ರೀ ಕುಂದೇಶ್ವರ ದೇಗುಲದ ಧರ್ಮದರ್ಶಿಯಾಗಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ, ಅರ್ಥಧಾರಿಯಾಗಿದ್ದ ದಿ.ರಾಘವೇಂದ್ರ ಭಟ್ ಸ್ಮರಣಾರ್ಥ, ಕ್ಷೇತ್ರದ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ ಜನವರಿ 21ರಿಂದ 23ರವರೆಗೆ ವರ್ಷಾವಧಿ ಜಾತ್ರೆ ನಡೆಯಲಿದ್ದು, ದಿನಾಂಕ 23 ಜನವರಿ 2026ರಂದು ರಾತ್ರಿ 7-00 ಗಂಟೆಯಿಂದ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ ಕದ್ರಿ ಮಹಿಳಾ ಯಕ್ಷಕೂಟದವರಿಂದ ಮಹಿಳಾ ಯಕ್ಷಗಾನ ಮತ್ತು ನಮ್ಮ ಬೆದ್ರ ತಂಡದವರಿಂದ ‘ವೈರಲ್ ವೈಶಾಲಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
