ಮಂಗಳೂರು : ಕರಾವಳಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಚಿತ್ರಕಲಾವಿದರಾದ ಉದಯ ಕೃಷ್ಣ ಜಿ. ಮತ್ತು ಅವರ ಪುತ್ರಿ ನಿಯತಿ ಯು. ಭಟ್ ಇವರ ಕಲಾ ಪ್ರದರ್ಶನ ‘ದ ದಾಪರ್ ಎಕ್ಸ್ಪೋ’ ದಿನಾಂಕ 17 ಜನವರಿ 2025ರಂದು ಮಂಗಳೂರಿನ ಬಲ್ಲಾಳ್ಬಾಗ್ನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು.

ತಂದೆ, ಮಗಳ ಕುಂಚದಿಂದ ಮೂಡಿ ಬಂದ 80ಕ್ಕೂ ಅಧಿಕ ಚಿತ್ರಗಳು ಪ್ರದರ್ಶನದಲ್ಲಿವೆ. ಸಾಮಾನ್ಯ ಪೈಂಟಿಂಗ್, ಡ್ರಾಯಿಂಗ್ ಗಳ ಜತೆಗೆ ಹೆಚ್ಚಿನ ಕೈ ಚಳಕದ ಅಗತ್ಯವಿರುವ ಮಂಡಲ ಆರ್ಟ್, ಅತೀ ಕಷ್ಟದ ಮತ್ತು ಬಹಳಷ್ಟು ಏಕಾಗ್ರತೆಯ ಅಗತ್ಯವಿರುವ ಸ್ಪ್ರಿಂಗ್ ಆರ್ಟ್ ಚಿತ್ರಗಳು ಪ್ರದರ್ಶನದಲ್ಲಿ ಆಕರ್ಷಿಸುತ್ತಿದ್ದು, ಛಾಯಾಚಿತ್ರಗಳಲ್ಲಿ ಅಂಡರ್ ವಾಟರ್ ಫೋಟೋಗ್ರಫಿ, ಹಾರುತ್ತಿರುವ ಹಕ್ಕಿಗಳ ಫೋಟೋಗಳು, ವಿಮಾನಗಳ ಕಸರತ್ತಿನ ಚಿತ್ರಗಳು ನೋಡುಗರನ್ನು ಸೆಳೆಯುತ್ತಿತ್ತು.


ಕಲಾಪ್ರದರ್ಶನವನ್ನು ಉದ್ಘಾಟಿಸಿದ ವಿಶ್ರಾಂತ ಪ್ರಾಂಶುವಾಲ ಪ್ರೊ. ಜಿ.ಎನ್. ಭಟ್ ಮಾತನಾಡಿ, “ಚಿತ್ರಕಲಾವಿದರಾಗಿ ತಂದೆ, ಮಗಳ ಜೋಡಿ ಈಗಾಗಲೇ ಯಶಸ್ವಿಯಾಗಿದ್ದು ಭವಿಷ್ಯದಲ್ಲೂ ಇದು ಮುಂದುವರಿಯಲಿ” ಎಂದರು. ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್ ಮಾತನಾಡಿ, “ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ಅಗತ್ಯ. ಈ ಪ್ರೋತ್ಸಾಹದಿಂದಲೇ ತಂದೆ- ಮಗಳ ಜೋಡಿ ಕಲಾವಿದರಾಗಿ ಯಶಸ್ವಿಯಾಗಿದ್ದಾರೆ” ಎಂದರು. ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ಮಾತನಾಡಿ, “ತಂದೆ ಮಗಳ ನಡುವೆ ತಲೆಮಾರಿನ ಅಂತರ ಇಲ್ಲ ಎನ್ನುವುದಕ್ಕೆ ಇಲ್ಲಿನ ಕಲಾಕೃತಿಗಳೇ ಅದಕ್ಕೆ ಸಾಕ್ಷಿ. ತಾಳ್ಮೆ ಶಿಸ್ತಿನಿಂದ ಈ ಸಾಧನೆ ಸಾಧ್ಯವಾಗಿದೆ” ಎಂದರು. ಚಿತ್ರಕಲಾವಿದರಾದ ಉದಯ ಕೃಷ್ಣ ಜಿ. ಸ್ವಾಗತಿಸಿ, ನಿರೂಪಿಸಿದರು. ನಿಯತಿ ಯು. ಭಟ್ ಉಪಸ್ಥಿತರಿದ್ದರು.

