ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 115ನೇ ತಿಂಗಳ ಕಾರ್ಯಕ್ರಮ, ಹನ್ನೊಂದನೇ ವಾರ್ಷಿಕೋತ್ಸವ ಹಾಗೂ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2026’ ಪ್ರದಾನ ಸಮಾರಂಭವು ದಿನಾಂಕ 25 ಜನವರಿ 2026ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ ಕುಂದೇಶ್ವರ ಇವರು ವಿಷ್ಣು ಸಹಸ್ರನಾಮ ಪಠಿಸಿದರು. ಶ್ರೀಮತಿ ವಸಂತಿ ಆರ್. ಪಂಡಿತ್ ಹಾಗೂ ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಗಂಗೊಳ್ಳಿ ಇವರ ಭಜನಾ ಕಾರ್ಯಕ್ರಮ ನಡೆಯಿತು. ಡಾ. ಕಾಶೀನಾಥ್ ಪೈ ಪ್ರಾರ್ಥಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ರು ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಕಾಶೀನಾಥ್ ಪೈ ಗಂಗೊಳ್ಳಿ, ಕರ್ನಾಟಕ ಬ್ಯಾಂಕ್ ಅಧಿಕಾರಿ (ನಿವೃತ್ತ) ಜನಾರ್ದನ ಹಂದೆ, ಉಪ್ಪಿನಕುದ್ರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ದೇವಡಿಗ ನೂಜಾಡಿ ಹಾಗೂ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತ ಜಿ. ಪ್ರಬಾರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಪನ್ಯಾಸಕರು ಡಾ. ಕೆ. ಕಿಶೋರ್ ಕುಮಾರ್ ಶೆಟ್ಟಿ ಇವರು ದೀಪ ಬೆಳಗಿಸಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2026’ಯನ್ನು ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಇವರಿಗೆ ಪ್ರದಾನ ಮಾಡಲಾಯಿತು. ನಂತರ ಅಂತರಾಷ್ಟ್ರೀಯ ಜಾದೂಗಾರ ಸತೀಶ್ ಹೆಮ್ಮಾಡಿ ಮತ್ತು ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 70 ವರ್ಷ ವಾದ್ಯಗಾರರಾಗಿ ಸೇವೆ ಸಲ್ಲಿಸಿದ ಸಂಜೀವ ದೇವಾಡಿಗರನ್ನು ಸನ್ಮಾನಿಸಲಾಯಿತು. ಉಪ್ಪಿನಕುದ್ರು ಗೊಂಬೆಯಾಟ ತಂಡದ ಹಿರಿಯ ಸೂತ್ರಧಾರಿ ವೆಂಕಟರಮಣ ಬಿಡುವಾಳ್ ಹಾಗೂ ರಮಾನಂದ ನಾಯ್ಕ ವಂಡ್ಸೆ ಇವರಿಗೆ ಶ್ರೀಮತಿ ಎಮ್. ರಾಜಶ್ರೀ ಆರ್. ಪೈ ಮತ್ತು ಎಮ್. ರತ್ನಾಕರ್ ಪೈ ಹಾಗೂ ವಿಶ್ವನಾಥ್ ಕಿಣಿ, ಕುಂದಾಪುರ ರವರು ವೈದ್ಯಕೀಯ ನೆರವು ನೀಡಿದರು. ಇನ್ಫೋಸಿಸ್ ಉದ್ಯೋಗಿ ಪ್ರತೀಕ್ಷಾ ಕಾಮತ್ರವರು ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಚಂದನ್ ಗೆ ಶಿಕ್ಷಣ ನಿಧಿಯಡಿಯಲ್ಲಿ ಶಾಲಾ ಸಾಮಾಗ್ರಿ ನೀಡಿದರು. ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ ಇದರ ಕಲಾವಿದರಾದ ಸುಜಯೀಂದ್ರ ಹಂದೆ ಮತ್ತು ಕಾವ್ಯಾ ಹಂದೆಯವರಿಂದ ಗಮಕ ವಾಚನ ನಡೆಯಿತು. ತದನಂತರ ಊರ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ನೃತ್ಯಗಳು ಮತ್ತು ಸಂಗೀತ ನೆರೆದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಮತ್ತು ರಾಜೇಂದ್ರ ಪೈಯವರು ಕಾರ್ಯಕ್ರಮ ನಿರ್ವಹಿಸಿದರು.
