ಮಂಗಳೂರು : ಕರಾವಳಿ ಲೇಖಕಿಯರ-ವಾಚಕಿಯರ ಸಂಘವು 2025-26ನೇ ಸಾಲಿನ ನಾನಾ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. ಮುಂಬಯಿಯ ಡಾ. ಸುನೀತಾ ಶೆಟ್ಟಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು ಮತ್ತು ಕನ್ನಡ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್ ರಾಡ್ರಿಗಸ್ ಆಯ್ಕೆಯಾಗಿದ್ದಾರೆ. ಕರಾವಳಿಯ ಮೊದಲ ತಲೆಮಾರಿನ ಲೇಖಕಿ ಚಂದ್ರಭಾಗಿ ರೈ ಇವರ ಹೆಸರಿನ ದತ್ತಿನಿಧಿ ಪುಸ್ತಕ ಬಹುಮಾನಕ್ಕೆ ಲೇಖಕಿಯರಿಂದ ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದ್ದು, ಬಾಗಲಕೋಟೆಯ ಮುರ್ತುಜಾ ಬೇಗಂ ಕೊಡಗಲಿಯವರ ‘ಹಣತೆ ಹಚ್ಚಿ ಬಿಡಿ ಹೆಜ್ಜೆ ಹೆಜ್ಜೆಗೂ’ ಕೃತಿಯು ಬಹುಮಾನ ಪಡೆದುಕೊಂಡಿದೆ. ‘ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ’ಗೆ ಸಂಶೋಧನಾತ್ಮಕ ಕೃತಿಗಳನ್ನು ಆಹ್ವಾನಿಸಲಾಗಿದ್ದು, ಲೇಖಕಿ, ಸಂಘಟಕಿ ಸುಖಲಾಕ್ಷಿ ವೈ. ಸುವರ್ಣ ಇವರ ‘ಮುಂಬಯಿ ಮತ್ತು ಮಹಿಳೆ’ ಕೃತಿ ಆಯ್ಕೆಯಾಗಿದೆ.
ದಿನಾಂಕ 07 ಫೆಬ್ರುವರಿ 2026ರಂದು ಮಧ್ಯಾಹ್ನ 2-30ಕ್ಕೆ ಉರ್ವಸ್ಟೋರ್‌ನ ಸಂಘದ ಸಾಹಿತ್ಯ ಸದನದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

