ಕಟೀಲು : ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 01 ಮಾರ್ಚ್ 2026ರ ಭಾನುವಾರ ಕಟೀಲಿನ ಕುದ್ರುವಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ದಿನಾಂಕ 22 ಜನವರಿ 2026ರಂದು ಕಟೀಲು ಸರಸ್ವತೀ ಸದನದಲ್ಲಿ ನಡೆದ ದ.ಕ. ಜಿಲ್ಲಾ ಕ.ಸಾ.ಪ. ಮೂಲ್ಕಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಯಿತು.
ನಂದಿನೀ ನದಿ ಹರಿಯುವ ಕಟೀಲಿನಲ್ಲಿ ಎರಡು ಪುಟ್ಟ ದ್ವೀಪಗಳಿದ್ದು, ಒಂದರಲ್ಲಿ ದೇವಸ್ಥಾನವಿದೆ. ಇನ್ನೊಂದರಲ್ಲಿ ಮೂಲ ಸ್ಥಾನವಿದ್ದು, ಪ್ರಕೃತಿಯ ಮಡಿಲಲ್ಲಿ ಎರಡು ಸಮಾನಾಂತರ ವೇದಿಕೆಗಳಲ್ಲಿ ಸಮ್ಮೇಳನ ನಡೆಯಲಿದೆ. ಒಂದು ವೇದಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಹಿರಿಯರ ನೆನಪು ಮಾಡಲಾಗುವುದು. ಇನ್ನೊಂದರಲ್ಲಿ ಕವಿ, ಕಥಾ ಗೋಷ್ಟಿಗಳು ನಡೆಯಲಿದ್ದು, ತಾಲೂಕಿನ ಯುವ ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಲಾಗುತ್ತದೆ.
ಈ ದ್ವೀಪದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭ ನಾಗಮಂಡಲ ನಡೆಯುತ್ತದೆ. ಇಲ್ಲಿ ನಾಗಾರಾಧನೆಗೆ ಮಹತ್ವವಿದೆ. ತಾಲೂಕು ಮಾತ್ರವಲ್ಲದೆ ಜಿಲ್ಲೆಯ ಖ್ಯಾತ ಹಾಗೂ ಯುವ ಚಿತ್ರಕಲಾವಿದರಿಂದ ನಂದಿನೀ ನದಿ, ಕಟೀಲು ಕ್ಷೇತ್ರದ ಪ್ರಕೃತಿಗೆ ಸಂಬಂಧಿಸಿ ವಿವಿಧ ಪ್ರಾಕಾರಗಳಲ್ಲಿ ಚಿತ್ರಗಳನ್ನು ರಚಿಸುವ ಮುಕ್ತ ಅವಕಾಶ ಕಲ್ಪಿಸಲಾಗುವುದು. ನಾಗಾರಾಧನೆ ಹಾಗೂ ಚಿತ್ರಕಲಾವಿದರಿಂದ ಕಲಾಕೃತಿಗಳನ್ನು ರಚಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಿತ್ರಕೂಟ ಎಂದು ಹೆಸರಿಡಲಾಗಿದೆ ಎಂದು ಮೂಲ್ಕಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಮಿಥುನ ಕೊಡೆತ್ತೂರು ತಿಳಿಸಿದರು.
ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಈ ಹಿಂದಿನ ಸಮ್ಮೇಳನಗಳಿಗೆ ಕಟೀಲು ದೇವಸ್ಥಾನ ಸಾಕಷ್ಟು ಸಹಕಾರ ನೀಡಿದೆ. ಇದೀಗ ಕಟೀಲಿನಲ್ಲೇ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ದೇಗುಲವು ಸಹಯೋಗ ನೀಡಲಿದೆ. ತಾಲೂಕಿನ ಮಾತ್ರವಲ್ಲದೆ ಎಲ್ಲೆಡೆಯ ಕನ್ನಡಾಭಿಮಾನಿಗಳು ಭಾಗವಹಿಸುವಂತೆ ಸಮ್ಮೇಳನ ಸಮಿತಿ ಪ್ರಯತ್ನಿಸಬೇಕೆಂದರು. ಕ.ಸಾ.ಪ. ತಾಲೂಕು ಕಾರ್ಯದರ್ಶಿಗಳಾದ ವೀಣಾ ಶಶಿಧರ್, ಹೆರಿಕ್ ಪಾಯಸ್, ಪ್ರಕಾಶ್ ಆಚಾರ್, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಹಿರಿಯ ಸಾಹಿತಿ ಉದಯಕುಮಾರ ಹಬ್ಬು, ಡಾ. ವಿಜಯ್ ವಿ., ಡಾ. ಪುರುಷೋತ್ತಮ ಕೆ.ವಿ., ರಾಜಶೇಖರ್ ಎಸ್., ಮೆಲ್ವಿನ್, ಸುರೇಶ್ ಭಟ್, ಮಾಧವ ಕೆರೆಕಾಡು, ದಯಾಮಣಿ ಶೆಟ್ಟಿ, ಪಾಂಡುರಂಗ ಭಟ್, ಅಶೋಕ್ ದೇವಾಡಿಗ, ಜಯಂತ ಸುವರ್ಣ, ದಿನೇಶ್, ದುರ್ಗಾಪ್ರಸಾದ್ ಮುಂತಾದವರಿದ್ದರು.
