ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗ ಮತ್ತು ಕನ್ನಡ ಸಂಘ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ‘ಅಂಬಿಗರ ಚೌಡಯ್ಯ : ವಚನ ಮೀಮಾಂಸೆ’ 19-05-2023ರಂದು ರವೀಂದ್ರ ಕಲಾಭವನ ವಿ.ವಿ. ಕಾಲೇಜು ಮಂಗಳೂರು ಇಲ್ಲಿ ನಡೆಯಲಿದೆ.
ಮಂಗಳೂರು ವಿ.ವಿ.ಯ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರ ಘನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಸನ್ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಆರ್. ಜೈನ್ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮದರಾಸು ವಿ.ವಿ.ಯ ಕನ್ನಡ ವಿಭಾಗದ ಅಧ್ಯಕ್ಷರು ಹಾಗೂ ಬೆಂಗಳೂರು ಕ.ಸಾ.ಪ.ದ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ತಮಿಳ್ ಸೆಲ್ವಿ ಆಶಯ ನುಡಿಗಳನ್ನಾಡಲಿರುವರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಪೂರ್ವಾಹ್ನದ ಅವಧಿಯಲ್ಲಿ ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಯಕದ ಪರಿಕಲ್ಪನೆ’ ಎಂಬ ವಿಷಯದ ಬಗ್ಗೆ ಗೋಷ್ಠಿ ನಡೆಯಲಿದ್ದು, ಶ್ರೀ ಧರ್ಮಸ್ಥಳ ಕಾಲೇಜು ಉಜಿರೆಯ ಪ್ರಾಧ್ಯಾಪಕರಾದ ಡಾ. ರಾಜಶೇಖರ ಹಳೆಮನೆ ಇವರು ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ವಿಕಾಸದ ಅಧ್ಯಕ್ಷರಾದ ಡಾ. ನಾಗವೇಣಿ ಮಂಚಿ ಇವರು ಗೋಷ್ಠಿ ಸಮನ್ವಯಕಾರರಾಗಿದ್ದು, ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇಲ್ಲಿಯ ಕಾನೂನು ವಿದ್ಯಾರ್ಥಿ ಕು. ಶ್ರೀಲಕ್ಷ್ಮಿ ಮಠದಮೂಲೆ ವಿದ್ಯಾರ್ಥಿ ಪ್ರತಿಕ್ರಿಯೆ ನೀಡುತ್ತಾರೆ.
ಎರಡನೇ ಗೋಷ್ಠಿ ಅಪರಾಹ್ನ ನಡೆಯಲಿದೆ. ಈ ಗೋಷ್ಠಿಯಲ್ಲಿ ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಪರಿಕಲ್ಪನೆ’ ಎಂಬ ವಿಷಯದ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ. ರತ್ನಾಕರ ಮಲ್ಲಮೂಲೆ ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಶ್ರೀ ಹರೀಶ್ ಟಿ.ಜಿ. ಸಮನ್ವಯಕಾರರಾಗಿ, ಮಂಗಳೂರಿನ ವಿ.ವಿ. ಕಾಲೇಜಿನ ಶ್ರೀ ಲತೇಶ್ ಸಾಂತ ವಿದ್ಯಾರ್ಥಿ ಪ್ರತಿಕ್ರಿಯೆ ನೀಡಲಿದ್ದಾರೆ.
ಗೋಷ್ಠಿಯ ನಂತರ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಗಳೂರು ವಿ.ವಿ.ಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ. ಸೋಮಣ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಡಾ. ಕೊಟ್ರಸ್ವಾಮಿ ಎ.ಎಂ.ಎಂ. ‘ಅಭಿಜಾತ’ ಕನ್ನಡ ಸಂಶೋಧನಾ ಪತ್ರಿಕೆ, ಪ್ರಾದೇಶಿಕ ಘಟಕ ಬೆಂಗಳೂರು ಇವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಕುಲಸಚಿವರು ಮಂಗಳೂರು ವಿ.ವಿ., ಪ್ರೊ. ಸೋಮಣ್ಣ ಸಂಯೋಜಕರು, ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮಂಗಳೂರು ವಿ.ವಿ., ವಿ.ವಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಾಧವ ಎಂ.ಕೆ. ಇವರು ತಮಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.