ಮೂಡುಬಿದಿರೆ : ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಉಷಾ ಆರ್. ರಾವ್ (56) ದಿನಾಂಕ 03 ಫೆಬ್ರವರಿ 2026ರಂದು ನಿಧನ ಹೊಂದಿದರು. ಅವರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
‘ಶರಧಿ’ ಕಾವ್ಯನಾಮದೊಂದಿಗೆ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದು, ‘ಶರದಿ ಕಾದಿದೆ’ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಉಷಾ ರಾವ್ ಅವರು ಕಾಗದದ ದೋಣಿ, ಅವಧಿ ನೀ ನಾದ ನಾ ನಿನಾದ, ಬಿಸಿಲು ಹೊತ್ತ ಬೆಳದಿಂಗಳು, ಕಲಾಕೃತಿಯಾದ ಚಂದನದ ಗೊಂಬೆ, ಉಸಿರು ಉಸಿರ ಸಪ್ತಸ್ವರ ಮೊದಲಾದ ಕೃತಿಗಳನ್ನು ಅವರು ರಚಿಸಿ ಪ್ರಕಟಿಸಿದ್ದು ಪ್ರತಿದಿನ ಬರೆದಿಟ್ಟ ಪುಟಗಳನ್ನು ಆನ್ ಲೈನ್ ಪ್ರತಿಲಿಪಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದವರು. ಅವರ ಪುಸ್ತಕಗಳನ್ನು ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆ ಮಾತ್ರವಲ್ಲ ಬಂಗಾಲದ ಗ್ರಂಥಾಲಯ ಇಲಾಖೆಯ ಕನ್ನಡ ವಿಭಾಗ ಖರೀದಿಸಿರುವುದು ವಿಶೇಷ. ಬೆಂಗಳೂರಿನ ಫೇಸ್ ಫೌಂಡೇಶನ್ ಟ್ರಸ್ಟ್, ವಿಕ್ರಮ ಪ್ರಕಾಶನ ಸಹಿತ ಹೆಸರಾಂತ ಪ್ರಕಾಶನ ಸಂಸ್ಥೆಗಳ ಮೂಲಕ ಇವರ ಕೃತಿಗಳು ಪ್ರಕಟವಾಗಿವೆ. ಸಾಹಿತಿ, ಅಂಕಣಕಾರ ಸಂತೋಷ್ ಕುಮಾರ ಮೆಹೆಂದಳೆ ಸಹಿತ ಅನೇಕ ಗಣ್ಯರು ಇವರ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
