ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಣಿಪಾಲ ಮತ್ತು ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸಮಿತಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸ್ತುತ ವರ್ಷದಿಂದ ಕೊಡಲ್ಪಡುವ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರ ಶುಕ್ರವಾರದಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಯನ್ನು ಪ್ರಸಿದ್ಧ ಕನ್ನಡ ಕವಿ, ಕಥೆಗಾರ, ವಿಮರ್ಶಕರಾದ ಶ್ರೀ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಬಿ.ಎ. ವಿವೇಕ ರೈ ಇವರು ವಹಿಸಲಿದ್ದು, ಪ್ರಶಸ್ತಿಯನ್ನು ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಪ್ರದಾನ ಮಾಡಲಿರುವರು. ಪ್ರಶಸ್ತಿ ಪುರಸ್ಕೃತರ ಕುರಿತು ವಿಶ್ರಾಂತ ಪ್ರಾಧ್ಯಾಪಕರು, ಹಿರಿಯ ಸಾಹಿತಿಗಳೂ ಆದ ಡಾ. ನಾ. ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿದ್ದು, ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರ ಸುಪುತ್ರರಾದ ಎಸ್.ಪಿ. ರಾಮಚಂದ್ರ, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಉಪಸ್ಥಿತರಿರುವರು. ಕಾರ್ಯಕ್ರಮದ ಆರಂಭದಲ್ಲಿ ಉಡುಪಿಯ ಪ್ರಸಿದ್ಧ ಗಾಯಕರಾದ ಶ್ರೀ ಕೆ.ಆರ್. ರಾಘವೇಂದ್ರ ಆಚಾರ್ಯ ಇವರಿಂದ ಎಸ್.ವಿ. ಪರಮೇಶ್ವರ ಭಟ್ಟ ಹಾಗೂ ಸುಬ್ರಾಯ ಚೊಕ್ಕಾಡಿ ಇವರ ಕವನಗಳ ಗಾಯನ ನಡೆಯಲಿದೆ.

