ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಆಶ್ರಯದಲ್ಲಿ ಜೆ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 05 ಫೆಬ್ರುವರಿ 2026ರಂದು ಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವೇದಿಕೆಯ ಮೇಲೆ ಶ್ರೀ ಬಿ.ಎಂ. ಪಾಟೀಲ್, ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಭಾರತೀಬಾಯಿ ಖಾಸನೀಸ್, ಗಮಕಿ ಶ್ರೀಮತಿ ಶಾಂತಾ ಕೌತಾಳ್, ವ್ಯಾಖ್ಯಾನಕಾರರಾದ ಕಲ್ಯಾಣರಾವ್ ದೇಶಪಾಂಡೆ, ಸಾಹಿತಿ ವಿ.ಡಿ. ಐಹೊಳ್ಳಿ ಉಪಸ್ಥಿತರಿದ್ದರು. ಶ್ರೀ ವಿ.ಡಿ. ಐಹೊಳ್ಳಿಯವರು ಕುಮಾರವ್ಯಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟನಾ ಪರ ಭಾಷಣ ಮಾಡಿದರು. ಆಮೇಲೆ ಬಿ.ಎಂ. ಪಾಟೀಲರು ಕರ್ನಾಟಕ ಗಮಕ ಕಲಾ ಪರಿಷತ್ತು ನಡೆದು ಬಂದ ಬಗೆಯನ್ನು ವಿವರಿಸಿದರು. ಶ್ರೀ ಭೀಮಾಶಂಕರ್ ಇವರು ‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’ ಎಂಬ ಪ್ರಾರ್ಥನಾ ಗೀತೆ ಹಾಡಿದರು.
ನಂತರ ನಡೆದ ಗಮಕ ಕಾರ್ಯಕ್ರಮದಲ್ಲಿ ಕವಿ ಕುಮಾರವ್ಯಾಸ ವಿರಚಿತ ಕರ್ನಾಟಕ ಕಥಾ ಮಂಜರಿ ಕಾವ್ಯದ ಆದಿಪರ್ವದ ‘ದ್ರೌಪದಿ ಸ್ವಯಂವರ’ ಭಾಗದ ಗಮಕ ವಾಚನ-ವ್ಯಾಖ್ಯಾನ ಜರುಗಿತು. ಹಿರಿಯ ಗಮಕ ವಿದುಷಿ ಶ್ರೀಮತಿ ಶಾಂತಾ ಕೌತಾಳರು ಸುಮಧುರವಾದ ಧ್ವನಿಯಲ್ಲಿ ‘ಶ್ರೀವನಿತೆಯರಸನೆ’ ಎಂಬ ಪೀಠಿಕಾ ಸಂಧಿಯ ಮಂಗಲಾಚರಣ ಪದ್ಯವನ್ನು ಓದುವದರೊಂದಿಗೆ ಕಾವ್ಯವಾಚನ ಆರಂಭಿಸಿದರು. ವ್ಯಾಖ್ಯಾನಕಾರರಾದ ಕಲ್ಯಾಣರಾವ್ ದೇಶಪಾಂಡೆಯವರು ಕವಿ ಪರಿಚಯ, ಪೂರ್ವಕತೆ ಹಾಗೂ ದ್ರೌಪದಿ ಸ್ವಯಂವರದಲ್ಲಿ ಕಾಣುವ ಮದುವೆ ಮಂಟಪದ ಸುಂದರ ವರ್ಣನೆ ಹಾಗೂ ಅರ್ಜುನನ ಬಿಲ್ವಿದ್ಯಾ ಪರಿಣತಿ, ಆತನ ಗುರುಭಕ್ತಿ, ದೈವಭಕ್ತಿ ಇವುಗಳನ್ನು ತಮ್ಮ ವ್ಯಾಖ್ಯಾನದಲ್ಲಿ ಕಣ್ಣು ಕಟ್ಟುವಂತೆ ಚಿತ್ರಿಸಿಕೊಟ್ಟರು. ಕೊನೆಗೆ ದ್ರೌಪದಿದೇವಿಯು ತನ್ನ ದೇಹದ ಪರಿಮಳದಿಂದ ಕೂಡಿದ ಹೂಮಾಲೆಯನ್ನು ಅರ್ಜುನನ ಕೊರಳಿಗೆ ಹಾಕುವ ಮಂಗಲ ಸನ್ನಿವೇಶದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾರ್ಯಕ್ರಮದ ಕೊನೆಗೆ ಗಮಕಿಗಳು ಕೇಳಿದ ಕಥಾಭಾಗದ ಹತ್ತು ಪ್ರಶ್ನೆಗಳಿಗೆ ಬಿ.ಎಡ್. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸರಿಯಾಗಿ ಉತ್ತರಿಸಿ ಗಮಕಿಗಳ ಮನಸ್ಸನ್ನು ಗೆದ್ದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಭಾರತೀಬಾಯಿ ಖಾಸನೀಸ್ ಇವರುಗಳು ಹಳಗನ್ನಡ, ನಡುಗನ್ನಡ ಕಾವ್ಯಗಳು ಕರ್ನಾಟಕದ ಸಾಂಸ್ಕೃತಿಕ ಜೀವನದ ದರ್ಪಣ ಎಂದು ವರ್ಣಿಸಿದರು. ಸಮಾರಂಭದಲ್ಲಿ ಕಾಲೇಜಿನ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ನಗರದ ಸಾಹಿತಿ ಮಿತ್ರರಾದ ಶ್ರೀ ಆನಂದ್ ಗೋಡ್ಸೆ, ವಿವೇಕ್ ಕುಲಕರ್ಣಿ, ರವಿ ಶಿವಮೊಗ್ಗಿ, ಕೃಷ್ಣ ಬಿಡಕರ್, ಪ್ರಮಿಲಾ ದೇಶಪಾಂಡೆ ಮುಂತಾದವರು ಭಾಗವಹಿಸಿದ್ದರು. ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಹಿರೇಮಠ್ ಅವರು ವಂದನಾರ್ಪಣೆ ಮಾಡಿದರು. ಸಭೆಯು ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯವಾಯಿತು.
