ಯಕ್ಷರಂಗದಲ್ಲಿ ಅನೇಕ ಯುವಪ್ರತಿಭಾನ್ವಿತ ಕಲಾವಿದರು ಮಿಂಚುತ್ತಿದ್ದಾರೆ. ಇಂತಹ ಯುವ ಕಲಾವಿದರ ಸಾಲಿನಲ್ಲಿ ಮಿನುಗುತ್ತಿರುವ ಕಲಾವಿದರು ಸನ್ಮಯ್ ಭಟ್ ಮಲವಳ್ಳಿ.
20.10.2001ರಂದು ಸುಬ್ಬಯ್ಯ ಭಟ್ ಹಾಗೂ ಸವಿತಾ ಭಟ್ ಇವರ ಮಗನಾಗಿ ಜನನ. ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ. ಬಾಲ್ಯದಿಂದಲೂ ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದು ಅಜ್ಜ ನಾರಾಯಣ ಭಟ್ ಮಲವಳ್ಳಿ ಕಲಾವಿದರಾಗಿ ಹಲವಾರು ವರ್ಷ ಮೇಳದ ತಿರುಗಾಟ ಮಾಡಿದವರು. ಅವರ ಪ್ರೋತ್ಸಾಹ ಹಾಗೂ ತಂದೆ ತಾಯಿಯರ ಪ್ರೋತ್ಸಾಹ, ಕಣ್ಣಿಮನೆ ಗಣಪತಿ ಭಟ್ ಹಾಗೂ ಉದಯ ಕಡಬಾಳ ಇವರ ವೇಷ ನೋಡಿ ಯಕ್ಷಗಾನ ರಂಗಕ್ಕೆ ಪ್ರೇರಣೆಗೊಂಡು ಯಕ್ಷಗಾನಕ್ಕೆ ಬಂದರು. ಸದಾಶಿವ ಭಟ್ ಮಲವಳ್ಳಿ ಹಾಗೂ ಅನಂತ ಕುಣಬಿ ಮಲವಳ್ಳಿ ಸನ್ಮಯ್ ಅವರ ಯಕ್ಷಗಾನ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿಯನ್ನು ಮಾಡಿಕೊಳ್ಳುತ್ತೀರಿ:-
ಹಿರಿಯ ಅನುಭವಿ ಕಲಾವಿದರಿಂದ ವೇಷದ ನಡೆಗಳನ್ನು ಕೇಳುವುದು, ಪ್ರಸಂಗ ಪುಸ್ತಕ ಓದುವುದು, ನನ್ನ ಕಲ್ಪನೆಯಲ್ಲಿ ಪಾತ್ರ ಚಿತ್ರಣವನ್ನು ರೂಪಿಸಿ ಸರಿಯೋ ತಪ್ಪೋ ಎಂದು ವಿಚಾರಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಸನ್ಮಯ.
ಸುಧನ್ವಾರ್ಜುನ, ಕೃಷ್ಣಾರ್ಜುನ, ರಾಣಿ ಶಶಿಪ್ರಭೆ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಕೃಷ್ಣ, ಅಭಿಮನ್ಯು, ಕಮಲಧ್ವಜ, ಪ್ರವೀರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಕೋವಿಡ್ ನಂತರ ಯಕ್ಷಗಾನ ತನ್ನ ವೈಭವವನ್ನು ಕಳೆದುಕೊಂಡಿದೆ. ಬೆಳಿಗ್ಗೆ ತನಕ ಕೂತು ಆಟ ನೋಡುವವರ ಸಂಖ್ಯೆ ತೀರಾ ಕಡಿಮೆ. ಟೆಂಟ್ ಮೇಳದಲ್ಲಂತು ಹೆಚ್ಚಿನ ದಿನ ಖಾಲಿ ಚೇರ್ಗಳನ್ನ ನೋಡುವಂತಾಗಿದೆ.
ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನಕ್ಕೆ ಪ್ರೇಕ್ಷಕರು ಅತೀ ಮುಖ್ಯ ಒಳ್ಳೆಯ ಪ್ರೇಕ್ಷಕರು ಕಲೆಯನ್ನ ಗೌರವಿಸಿ ಕಲಾವಿದ ತಪ್ಪಿದಲ್ಲಿ ಚೌಕಿಗೆ ಬಂದು ಹೇಳಿಹೋಗುತ್ತಾರೆ. ಕೆಲವಷ್ಟು ಪ್ರೇಕ್ಷಕರು ಯಾವುದೊ ಒಬ್ಬ ಕಲಾವಿದನ ಅಭಿಮಾನಿಯಾಗಿಯು ಯಕ್ಷಗಾನ ನೋಡುವುದಕ್ಕೆ ಬರುವುದಿದೆ. ಅಂತವರ ವಿಮರ್ಶೆಗಳು ಅವರ ಕಾಮೆಂಟಗಳು ವಿಚಿತ್ರ ಅನ್ನಿಸ್ತದೆ. ಯಕ್ಷಗಾನದ ಬಗ್ಗೆ ಏನು ಅರಿವಿಲ್ಲದೆ ಮಾತನಾಡಿದಾಗ ತುಂಬಾ ಬೇಜಾರು ಆಗುತ್ತದೆ ಎಂದು ಹೇಳುತ್ತಾರೆ ಸನ್ಮಯ.
ಯಕ್ಷಗಾನದಲ್ಲಿ ಒಬ್ಬ ಒಳ್ಳೆಯ ಕಲಾವಿದನಾಗಿ ಬೆಳೆಯಬೇಕೆಂಬುದೇ ನನ್ನ ಮುಂದಿನ ಯೋಜನೆ ಎಂದು ಹೇಳುತ್ತಾರೆ ಸನ್ಮಯ.
ಗುಂಡಬಾಳ, ಜಲವಳ್ಳಿ, ಹಾಲಾಡಿ, ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ.
ಕೃಷಿಯಲ್ಲಿ ತುಂಬಾ ಆಸಕ್ತಿ. ಯಕ್ಷಗಾನ ಹೊರತುಪಡಿಸಿ ಉಳಿದ ಎಲ್ಲ ಸಮಯವನ್ನು ಅಡಿಕೆ ತೋಟದಲ್ಲಿ ಕಳೆಯುತ್ತೇನೆ ಎಂದು ಹೇಳುತ್ತಾರೆ ಸನ್ಮಯ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- Niranjan Photography, Navya Holla, Supreetha Bhat.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು