ಉಡುಪಿ : ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶಿವಪಾಡಿ ವೈಭವದ ಪ್ರಯುಕ್ತ ದಿನಾಂಕ 14 ಫೆಬ್ರವರಿ 2026ರಂದು ‘ನರ್ತನ 2026’ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಸಿ.ಐ.ಐ. ನಿಕಟಪೂರ್ವ ಅಧ್ಯಕ್ಷ ದೇವಿಚರಣ್ ಕಾವಾ “ಇಡೀ ಗ್ರಾಮವೇ ಸಂಭ್ರಮಪಡುವ ಶಿವಪಾಡಿ ವೈಭವ ಕಾರ್ಯಕ್ರಮದ ಜತೆಗೆ ವಿವಿಧ ಸ್ಪರ್ಧೆಗಳು, ವಸ್ತುಪ್ರದರ್ಶನ ಆಯೋಜಿಸಿರುವುದು ಹಬ್ಬದ ವಾತಾವರಣವನ್ನು ಉಂಟು ಮಾಡಿದೆ” ಎಂದು ಹೇಳಿದರು.

ಮಾಹೆ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು ಅಧ್ಯಕ್ಷತೆ ವಹಿಸಿ, “ನಟರಾಜನ ನಾಟ್ಯವನ್ನು ಪ್ರದರ್ಶಿಸುವ ಕಲೆ ಇಲ್ಲಿ ಅನಾವರಣವಾಗಲಿದ್ದು, ಇದು ಶಿವನಿಗೆ ಸಮರ್ಪಿಸುವ ನಟರಾಜನ ಸೇವೆಯಾಗಿದೆ. ನಟರಾಜನ ಸಾನಿಧ್ಯದಲ್ಲಿ ನೃತ್ಯ ಮಾಡಿದರೆ ಮತ್ತಷ್ಟು ಅವಕಾಶ ಒದಗಿಬರಲು ಸಾಧ್ಯವಿದೆ. ಶಿವಪಾಡಿ ವೈಭವ ವರ್ಷಂಪ್ರತಿ ಹೊಸತನದೊಂದಿಗೆ ಬರುತ್ತಿದೆ. ಹೊಸತನದ ಮೂಲಕ ಧಾರ್ಮಿಕ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ” ಎಂದರು.

ಅಭಿನಂದನ್ ಉಡುಪಿಯ ರಂಜಿತ್ ಶೆಟ್ಟಿ, ಶಿವಪಾಡಿ ವೈಭವ ಆಚರಣ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ಟ್ರಸ್ಟಿ ದಿನೇಶ್ ಸಾಮಂತ್, ತೀರ್ಪುಗಾರರಾದ ಸಚಿನ್ ಸಾಲ್ಯಾನ್, ರಾಕೇಶ್ ಭಟ್, ಪ್ರಮೋದ್ ಉಳ್ಳಾಲ್ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್ ಸ್ವಾಗತಿಸಿ, ಡಾ. ಪ್ರತಿಮಾ ಜಯಪ್ರಕಾಶ್ ನಿರೂಪಿಸಿದರು.
