ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರವರೆಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಇಂತಹ ಶ್ರೇಷ್ಠ ಕಲೆಯಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಕಲಾವಿದರು ಗಿಳಿಯಾರು ಗೋಪಾಲಕೃಷ್ಣ ಪೈ.
16.01.1961ರಂದು ಶ್ರೀ ಕೆ.ರಾಮನಾಥ ಪೈ ಮತ್ತು ಶ್ರೀಮತಿ ರಾಧಾ ಬಾಯ್ ಇವರ ಮಗನಾಗಿ ಗಿಳಿಯಾರು ಗೋಪಾಲಕೃಷ್ಣ ಪೈ ಜನನ. ಪ್ರಾಥಮಿಕ ಶಿಕ್ಷಣವನ್ನು ಪರಮಹಂಸ ಪ್ರೌಢ ಪ್ರಾಥಮಿಕ ಶಾಲೆ ಬನ್ನಾಡಿ, ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣವನ್ನು ವಿವೇಕ ಪದವಿಪೂರ್ವ ಕಾಲೇಜು ಕೋಟ ಹಾಗೂ ಬಿಕಾಂ ಪದವಿಯನ್ನು ಭಂಡಾರ್ ಕಾರ್ಸ್ ಕಾಲೇಜು ಕುಂದಾಪುರದಲ್ಲಿ ಪಡೆದರು.
ಯಕ್ಷಗಾನದ ಗುರುಗಳು:-
ಶ್ರೀ ಗುಂಡ್ಮಿ ಸದಾನಂದ ಐತಾಳ್.
ಶ್ರೀ ಎಚ್. ಗೋವಿಂದ ಉರಾಳ.
ಶ್ರೀ ಕೃಷ್ಣಮೂರ್ತಿ ಉರಾಳ.
ಶ್ರೀ ಹಳ್ಳಾಡಿ ಸುಬ್ರಾಯ ಮಲ್ಯ.
ಶ್ರೀ ತೋನ್ಸೆ ಜಯಂತ್ ಕುಮಾರ್.
ಶ್ರೀ ಎಂ.ಹೆಚ್.ಪ್ರಸಾದ್ ಕುಮಾರ್ ಮೊಗೆಬೆಟ್ಟು.
ಸಣ್ಣವನಿದ್ದಾಗ ಯಕ್ಷಗಾನ ನೋಡಲು ಹೋಗುತ್ತಿದ್ದೆ. ನನಗೂ ವೇಷ ಮಾಡಬೇಕು ಎನ್ನುವ ಆಸೆ. ಆಗ ಯಕ್ಷಗಾನ ತರಬೇತಿ ಕೇಂದ್ರಗಳಿರಲಿಲ್ಲ (ಹೆಜ್ಜೆಗಾರಿಕೆ). ಆಸೆ ಕನಸಾಗಿಯೇ ಉಳಿಯಿತು. ಪದವಿ ಮುಗಿಸಿದಾಕ್ಷಣ ಗಿಳಿಯಾರಿನಲ್ಲಿ ಸಮತಾ ಯಕ್ಷರಂಗವನ್ನು ಹುಟ್ಟುಹಾಕಿ, ಹೆಜ್ಜೆಗಾರಿಕೆ ತರಬೇತಿ ತರಗತಿ ಪ್ರಾರಂಭ ಮಾಡಿ ಶ್ರೀ ಗುಂಡ್ಮಿ ಸದಾನಂದ ಐತಾಳರನ್ನು ಕರೆಸಿ(1986), ನಂತರ ಮಾಯಾಪುರಿ, ವೀರಮಣಿ ಪ್ರಸಂಗ ಪ್ರದರ್ಶನವಾಯಿತು. (1987 ಮೊದಲ ವೇಷ ಪುಷ್ಕಳ) ಹೀಗೆ ಯಕ್ಷಗಾನ ರಂಗಕ್ಕೆ ಇವರ ಪಾದಾರ್ಪಣೆ ಮಾಡಿ ವಿವಿಧ ಯಕ್ಷಗಾನ ಸಂಘಗಳಲ್ಲಿ ವೇಷ ಮಾಡುತ್ತಾ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಕಥೆ, ಸನ್ನಿವೇಶ, ದೃಶ್ಯ, ಇವುಗಳನ್ನು ಸರಿಯಾಗಿ ಗ್ರಹಿಸಿ, ಅದನ್ನು ಪುಸ್ತಕದಲ್ಲಿ ಬರೆದು, ಪದ್ಯ ಅರ್ಥವನ್ನು ಬರೆದು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪೈಯವರು.
ಚಂದ್ರಹಾಸ, ತುಳಸೀ ಜಲಂಧರ, ವೀರಮಣಿ ಕಾಳಗ, ಕಂಸ ಜನ್ಮ ಕಂಸ ವಧೆ, ಅಶ್ವಿನಿ ವಿಜಯ, ವೀರ ಬರ್ಬರೀಕ, ಯಕ್ಷೋತ್ತಮ ಕಾಳಗ ನೆಚ್ಚಿನ ಪ್ರಸಂಗಗಳು. ಕೌರವ (ದ್ರೋಣಪರ್ವ), ದುಷ್ಟಬುದ್ಧಿ, ಮದನ, ಜಲಂಧರ, ಉಗ್ರಸೇನ, ಸೂರ್ಯ, ಧ್ರುವ, ಘಟೋತ್ಕಚ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಹಿಂದೆ ನಡೆಯುತ್ತಿದ್ದ ರೀತಿ ಇಲ್ಲ. ಹೊಸ ಪ್ರಸಂಗಗಳ ಹಾವಳಿಯಿಂದ ಸಂಪ್ರದಾಯ, ನಡೆ ಇಲ್ಲ. ಕುಣಿತದಲ್ಲಿ ಹೊಸತನ, ಭಾಗವತಿಕೆಯಲ್ಲಿ ನವೀನತೆ, ಹಾಸ್ಯಕ್ಕೆ ಪ್ರಾಮುಖ್ಯತೆ, ಇಂದಿನ ಕಾಲದಲ್ಲಿ ಹೆಚ್ಚು ತೋರುತ್ತಾ ಇದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇವತ್ತಿನ ದಿನಗಳಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆ. ಯಕ್ಷಗಾನ ಉಳಿಸುವಲ್ಲಿ ಪ್ರೇಕ್ಷಕರ ಪಾತ್ರ ಮಹತ್ತರವಾದದ್ದು. ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಪ್ರೇಕ್ಷಕರಿಗೆ ಅಭಿರುಚಿ ಉಂಟಾಗಬೇಕು.
ಯಕ್ಷಗಾನ ರಂಗದ ಮುಂದಿನ ಯೋಜನೆ:-
ಅದೆಷ್ಟೋ ಹವ್ಯಾಸಿ ಕಲಾವಿದರು ಎಲೆಮರೆಯ ಕಾಯಿಯಂತಿದ್ದಾರೆ. ಅವರನ್ನು ಗುರುತಿಸಬೇಕು ಎನ್ನುವುದು ಆಶಯ. ಯಾಕೆಂದರೆ ಯಕ್ಷಗಾನದಲ್ಲಿ ಸಂಪ್ರದಾಯ ಎನ್ನುವುದನ್ನು ಉಳಿಸಿಕೊಂಡವರೆಂದರೆ ಹವ್ಯಾಸಿ ಯಕ್ಷಗಾನ ಕಲಾವಿದರು ಮಾತ್ರ. ವೃತ್ತಿಪರ ಕಲಾವಿದರಿಗೆ ಸಿಗುವ ಎಲ್ಲಾ ಸವಲತ್ತು ಸೌಲಭ್ಯ ಹವ್ಯಾಸಿ ಕಲಾವಿದರಿಗೂ ಸಿಗಲಿ ಎನ್ನುವುದು ಆಸೆ.
ಸನ್ಮಾನ ಹಾಗೂ ಪ್ರಶಸ್ತಿ:-
ಮಿತ್ರ ಯಕ್ಷಗಾನ ಮಂಡಳಿ, ಸರಳೇಬೆಟ್ಟು.
ಶ್ರೀ ಸಾರ್ವಜನಿಕ ಗಣೇಶೋತ್ಸವ ಕೆದೂರು.
ಶ್ರೀ ಸಿದ್ದೇಶ್ವರ ಯಕ್ಷರಂಗ ಬನ್ನಾಡಿ.
ಶ್ರೀ ಯಕ್ಷ ಸೌರಭ ಹಿರೇ ಮಹಾಲಿಂಗೇಶ್ವರ ಕಲಾರಂಗ.
ಶ್ರೀ ಮಹಾಗಣಪತಿ ಯಕ್ಷಗಾನ ಸಂಘ ಹೇರಿಕುದ್ರು.
ಶ್ರೀ ಅಯ್ಯಪ್ಪ ಸ್ವಾಮಿ ಸಮಿತಿ, ಹಂಗಾರಕಟ್ಟೆ.
ಯಾವುದೇ ಮೇಳದಲ್ಲಿ ಭಾಗವಹಿಸಲಿಲ್ಲ. ವಿವಿಧ ಮೇಳಗಳಿಂದ ಕರೆ ಬಂದಿದೆ. ಆದರೂ ಹವ್ಯಾಸಿಯಾಗಿಯೇ ಇರಬೇಕು ಎನ್ನುವ ಆಸೆ. ಯಾಕೆಂದರೆ ಸಂಪ್ರದಾಯ ಉಳಿದಿರುವುದು ಅವರಲ್ಲಿ ಮಾತ್ರ ಎಂದು ಗಿಳಿಯಾರು ಗೋಪಾಲಕೃಷ್ಣ ಪೈ ಅವರ ಅಭಿಪ್ರಾಯ.
ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ (ಪುರಾಣ ಪ್ರಸಂಗಗಳು) ನೋಡುವುದು, ಭಜನೆ ಇವರ ಹವ್ಯಾಸಗಳು.
ಗಿಳಿಯಾರು ಗೋಪಾಲಕೃಷ್ಣ ಪೈ ಅವರು 18.05.1987ರಂದು ಗೀತಾ ಪೈ ಇವರನ್ನು ಮದುವೆಯಾಗಿ ಮಕ್ಕಳಾದ ಅಶ್ವಿನಿ ಪೈ, ಅವಿನಾಶ್ ಪೈ, ಅರ್ಚನಾ ಪೈ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು