ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘದಲ್ಲಿ ದಿನಾಂಕ 21-05-2023ರಂದು ಅಪರಾಹ್ನ ಗಂಟೆ 2-30ಕ್ಕೆ ಕಾಸರಗೋಡಿನ ಪ್ರಬುದ್ಧ ಲೇಖಕಿ ಶ್ರೀಮತಿ ಶೀಲಾಲಕ್ಷ್ಮೀಯವರ ‘ಸರಸ ಸಮರಸ’ ಕಾದಂಬರಿ ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ರಶ್ಮಿ ಅರಸ್ ಅವರ ಆಶಯ ಗೀತೆಯೊಂದಿಗೆ ಆರಂಭವಾಗುವ ಈ ಕಾರ್ಯಕ್ರಮವು ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಲೇಖಕಿ ಬಿ. ಸತ್ಯವತಿ ಭಟ್ ಕೊಳಚಪ್ಪು ಕೃತಿ ಲೋಕಾರ್ಪಣೆ ಮಾಡುವರು. ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಶೈಲಜಾ ಕೆ. ಲೋಕಾರ್ಪಣೆಗೊಂಡ ಕೃತಿಯ ಪರಿಚಯ ಮಾಡಿಕೊಡುತ್ತಾರೆ. ಕೃತಿಯ ಲೇಖಕಿ ಶೀಲಾಲಕ್ಷ್ಮೀ ಕಾಸರಗೋಡು ಉಪಸ್ಥಿತರಿರುತ್ತಾರೆ. ಸ್ವಾಗತ ಮತ್ತು ಪ್ರಸ್ತಾವನೆ ಶ್ರೀಮತಿ ಆಕೃತಿ ಎಸ್. ಭಟ್ ಮತ್ತು ಶ್ರೀಮತಿ ರೇಖಾ ಶಂಕರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಕ.ಲೇ.ವಾ.ದ ಬಗ್ಗೆ ಎರಡು ಮಾತು :
ದ.ಕ. ಜಿಲ್ಲೆ ಮತ್ತು ಕಾಸರಗೋಡಿನ ಲೇಖಕರು ಮತ್ತು ಸಾಹಿತ್ಯಾಸಕ್ತರನ್ನು ಒಳಗೊಂಡ ಒಂದು ಸಂಘಟನೆ ಕರಾವಳಿ ಲೇಖಕಿಯರ ವಾಚಕಿಯರ ಸಂಘ. ಇದು ಸ್ವಂತ ನೆಲೆಯನ್ನು ಹೊಂದಿದ ತೃಪ್ತಿಯೊಂದಿಗೆ ಮೂವತ್ತೈದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಅನೇಕ ಬರಹಗಾರರ ಅನೇಕ ಕೃತಿಗಳು ಇಲ್ಲಿ ಲೋಕಾರ್ಪಣೆಗೊಂಡಿವೆ. ಬರವಣಿಗೆಯಲ್ಲಿ ಆಸಕ್ತಿಯೊಂದಿ ಚಿಗುತ್ತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಇಲ್ಲಿ ನಡೆಯುತ್ತದೆ. ಗಾಯನ, ನಟನೆ, ವಾಚನಕ್ಕೆ ಸಂದರ್ಭೋಚಿತವಾಗಿ ಅವಕಾಶ ಕಲ್ಪಿಸಿ ಕೊಡುವ ವಿಚಾರ ಶ್ಲಾಘನೀಯ. ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಸಾಧನೆ ಮಾಡಿದ ಹಲವು ಪ್ರತಿಷ್ಟಿತರು ಈ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈಗ ಸಾಹಿತ್ಯದ ಹಲವು ಮಗ್ಗಲುಗಳಲ್ಲಿ ಕೈಯಾಡಿಸಿದ ಡಾ. ಜ್ಯೋತಿ ಚೇಳ್ಯಾರು ಇವರ ಸಮರ್ಥ ಅಧ್ಯಕ್ಷತೆಯಲ್ಲಿ ಸದಸ್ಯೆಯರ ಪ್ರೀತಿ ಸಹಕಾರದೊಂದಿಗೆ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮುಂದುವರಿಯುತ್ತಿದೆ.
ಕೃತಿಯ ಲೇಖಕಿ ಶೀಲಾಲಕ್ಷ್ಮೀ ಕಾಸರಗೋಡು:
ಶೀಲಾಲಕ್ಷ್ಮೀಯವರು ಇಂಗ್ಲಿಷ್ ಸಾಹಿತ್ಯದ ಪದವೀಧರೆ ಮತ್ತು ಇತ್ತೀಚೆಗೆ ತಮ್ಮ ಅರುವತ್ತನೇ ವಯಸ್ಸಿನಲ್ಲಿ ಕನ್ನಡ ಸಾಹಿತ್ಯದಲ್ಲೂ ಪದವಿಯನ್ನು ಪಡೆದದ್ದು ಇವರ ವಿಶೇಷತೆ. ಲಘು ಬರೆಹ, ಕಥೆ, ಕಾದಂಬರಿಗಳನ್ನು ಬರೆಯುವುದು ಇವರ ಹವ್ಯಾಸ. ಸರಸ-ಸಮರಸ ಕಾದಂಬರಿ ಅವರ ಮೂರನೇ ಕೃತಿ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯಲ್ಲಿ 2008ನೇ ಸಾಲಿನ ಪ್ರಶಸ್ತಿ ವಿಜೇತೆಯಾದ ಇವರು ಗೃಹಿಣಿಯಾಗಿದ್ದಾರೆ. ಪ್ರಾದೇಶಿಕೆ ಪತ್ರಿಕೆಯಲ್ಲಿ ಸುಮಾರು ಒಂದು ವರ್ಷ ಕಾಲ ಅಂಕಣ ಬರಹಗಾರ್ತಿಯಾಗಿ ಮತ್ತು ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು ಬೆಳಕು ಕಂಡಿವೆ. ಪ್ರತಿಲಿಪಿ ಪೋರ್ಟಲ್ ಕನ್ನಡ ವಿಭಾಗದಲ್ಲಿ ಇವರು ಶೀಲಾಲಕ್ಷ್ಮೀ (ಶೀಲಾಶಂಕರ್) ಹೆಸರಲ್ಲಿ ಖಾಯಂ ಬರೆಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.