ಮಂಗಳೂರು : ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಆಡಳಿತಕ್ಕೊಳಪಟ್ಟ ಪುರಾತನ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಕ್ಷೇತ್ರದ ಬಗೆಗಿನ 2 ತುಳು ಮತ್ತು 6 ಕನ್ನಡ ಹಾಡುಗಳ ಸಂಗಮ ‘ಪುಣ್ಯನೆಲ ಪೆರಣಂಕಿಲ’ ಭಕ್ತಿಗೀತೆಗಳ ಧ್ವನಿ ಕರಂಡಿಕೆ ಬಿಡುಗಡೆಗೆ ಸಿದ್ಧವಾಗಿದೆ. ಮುಂಬಯಿಯ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನೇತೃತ್ವದಲ್ಲಿ ಬೆಂಗಳೂರಿನ ಓಂಕಾರ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನೆರವೇರಿದೆ.
ಮುಂಬೈ ವಿದ್ಯಾ ವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಾಲಯದ ಧರ್ಮದರ್ಶಿ ಹಾಗೂ ಪೆರ್ಣಂಕಿಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಮೂರ್ತಿ ಪೆರ್ಣಂಕಿಲ ಶ್ರೀ ಹರಿದಾಸ್ ಭಟ್ ಅವರು ಈ 8 ಹಾಡುಗಳ ಆಡಿಯೋ ಆಲ್ಬಂನ ನಿರ್ಮಾಪಕರಾಗಿ ಯೋಜನೆಯ ಸಂಪೂರ್ಣ ಪ್ರಾಯೋಜತ್ವ ವಹಿಸಿದ್ದಾರೆ.
ಡಾ. ವಿದ್ಯಾ ಭೂಷಣರ ಹಾಡುಗಾರಿಕೆ:
ಮಂಗಳೂರಿನ ಕವಿ – ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಕ್ಷೇತ್ರ ಇತಿಹಾಸ, ಸುಪ್ರಭಾತ ಮತ್ತು ಸಾನಿಧ್ಯ ಮಹಿಮೆಗಳನ್ನೊಳಗೊಂಡ ಭಕ್ತಿ ಗೀತಾಗುಚ್ಛದಲ್ಲಿ 4 ಹಾಡುಗಳಿಗೆ ಬೆಂಗಳೂರಿನ ಪ್ರಸಿದ್ಧ ಗಾಯಕ ಮತ್ತು ದಾಸರ ಪದಗಳ ಖ್ಯಾತಿಯ ಡಾ. ವಿದ್ಯಾಭೂಷಣರು ಕಂಠದಾನ ಮಾಡಿದ್ದಾರೆ. ಉಳಿದಂತೆ ಖ್ಯಾತ ಗಾಯಕಿಯರಾದ ಎಂ.ಡಿ. ಪಲ್ಲವಿ, ಸುಪ್ರಿಯಾ ರಘುನಂದನ್, ಶ್ರಾವ್ಯ ಆಚಾರ್ ಬೆಂಗಳೂರು, ಶ್ರದ್ಧಾ ವಿನಯ್ ಮುಂಬಯಿ ಮತ್ತು ಸಂಯೋಜಕ ಪದ್ಮನಾಭ ಸಸಿಹಿತ್ಲು ಹಾಡಿದ್ದಾರೆ.
ಎಂ.ಡಿ. ಪಲ್ಲವಿ
ಸುಪ್ರಿಯಾ ರಘುನಂದನ್
ಶ್ರದ್ಧಾ ವಿನಯ್
ಸಾಹಿತ್ಯ: ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ
ರಾಗ ಸಂಯೋಜನೆ ಡಾ. ವಿದ್ಯಾಭೂಷಣ, ಬಿ.ವಿ. ಶ್ರೀನಿವಾಸ್ ಬೆಂಗಳೂರು, ತೋನ್ಸೆ ಪುಷ್ಕಳ ಕುಮಾರ್ ಮತ್ತು ಪದ್ಮನಾಭ ಸಸಿಹಿತ್ಲು ಅವರದು. ಬೆಂಗಳೂರಿನ ಗಿಟಾರ್ ಶ್ರೀ ಶ್ರೀನಿವಾಸ್ ಆಚಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಓಂಕಾರ್ ಮೂರ್ತಿ ಧ್ವನಿ ಮುದ್ರಿಸಿಕೊಂಡಿದ್ದಾರೆ.
ಇದೇ ಮೇ 21, 2023 ರವಿವಾರ ಬೆಳಗ್ಗೆ ಗಂಟೆ 9.00ಕ್ಕೆ ಉಡುಪಿ ಹಿರಿಯಡ್ಕ ಸಮೀಪದ ಶ್ರೀಕ್ಷೇತ್ರ ಪೆರ್ಣಂಕಿಲದಲ್ಲಿ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಗಣ್ಯರ ಸಮ್ಮುಖ ‘ಪುಣ್ಯನೆಲ ಪೆರಣಂಕಿಲ’ ಭಕ್ತಿಗೀತೆಗಳ ಧ್ವನಿ ಕರಂಡಿಕೆಯನ್ನು ಬಿಡುಗಡೆ ಮಾಡಲಿದ್ದು, ಅದು ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಪೆನ್ ಡ್ರೈವ್ ರೂಪದಲ್ಲಿ ಲಭ್ಯವಿದೆಯೆಂದು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ತಿಳಿಸಿದ್ದಾರೆ. ರೂ.700/- ಬೆಲೆಯ ಧ್ವನಿ ಕರಂಡಿಕೆಯ ಮಾರಾಟದಿಂದ ಬರುವ ಹಣವನ್ನು ಜೀರ್ಣೋದ್ಧಾರ ಕೆಲಸಗಳಿಗೆ ಬಳಸಲಾಗುವುದು ಎಂದವರು ಪ್ರಕಟಿಸಿದ್ದಾರೆ.
ಅದೇ ದಿನ ಬೆಳಿಗ್ಗೆ ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿಗಳಿಗೆ ಶಿಲಾನ್ಯಾಸ, ಸಮ್ಮಾನ ಮತ್ತು ನಾಟ್ಯ ವೈಭವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ ತಿಳಿಸಿದ್ದಾರೆ.