ಉಡುಪಿ: ತುಳು ಕೂಟ ಉಡುಪಿ (ರಿ.) ಈ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ 28ನೇ ವರ್ಷದ ‘ಪಣಿಯಾಡಿ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು 28 ಮೇ 2023ರಂದು ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್ ಟಾಪ್ ಸಭಾಂಗಣದಲ್ಲಿ ನಡೆಸಲಿದೆ.
ತುಳು ಕೂಟ ಉಡುಪಿಯ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಉಡುಪಿ ಕ್ಷೇತ್ರದ ಶಾಸಕರಾದ ಶ್ರೀ ಯಶಪಾಲ್ ಸುವರ್ಣ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನ ಚಿತ್ರನಟಿ ಶ್ರೀಮತಿ ಹರಿಣಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಉದ್ಯಮಿ ಹಾಗೂ ಸಮಾಜ ಸೇವಕರಾದ ಶ್ರೀ ಯು. ವಿಶ್ವನಾಥ ಶೆಣೈ ಇವರುಗಳು ಪಾಲ್ಗೊಳ್ಳಲಿದ್ದಾರೆ.
ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ದಿ.ಎಸ್.ಯು.ಪಣಿಯಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಗುರುತಿಸಿಕೊಂಡವರು. ಇವರ ಸವಿನೆನಪಿಗಾಗಿ ಉಡುಪಿ ತುಳು ಕೂಟವು ಕಳೆದ 28 ವರ್ಷಗಳಿಂದ “ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ” ನೀಡುತ್ತಿದೆ.
ಮಂಗಳೂರಿನ ಕಾವೂರಿನವರಾದ ಕನ್ನಡ ಮತ್ತು ತುಳು ಸಾಹಿತಿ ಶ್ರೀಮತಿ ಯಶೋಧಾ ಮೋಹನ್ ಇವರ ‘ದೇರ ಮಾಮುನ ದೂರ ನೋಟೊಲು’ ಎಂಬ ಕಾದಂಬರಿ ಕೃತಿ ‘ಪಣಿಯಾಡಿ ಕಾದಂಬರಿ ಪ್ರಶಸ್ತಿ -2022’ಕ್ಕೆ ಆಯ್ಕೆಯಾಗಿದೆ. ಸಾಹಿತಿ ಯಶೋಧಾ ಮೋಹನ್ ಇವರೂ ವೇದಿಕೆಯಲ್ಲಿರುತ್ತಾರೆ. ಜಾನಪದ ವಿದ್ವಾಂಸರಾದ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ್ ಎಕ್ಕಾರ್ ಕೃತಿ ಪರಿಚಯ ಮಾಡಲಿದ್ದಾರೆ.
ಸಾಹಿತಿ ಯಶೋದಾ ಮೋಹನ್ ಮಂಗಳೂರು ಆಕಾಶವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಹಲವಾರು ಕಥೆ, ಕವನ, ಲೇಖನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕಥಾ ಸ್ಪರ್ಧೆಯಲ್ಲಿ ಇವರ ‘ಮಂದಾರ ಪುರ್ಪೊಲು’ ಕತೆಗೆ ಪ್ರಥಮ ಸ್ಥಾನ ದೊರೆತಿದೆ. ಇವರ ಕತೆಗಳು ತೆಲುಗು, ಕೊಂಕಣಿ ಭಾಷೆಗಳಿಗೆ ಅನುವಾದಗೊಂಡಿವೆ.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸದಸ್ಯರಾಗಿರುವ ಇವರು, ತುಳು ಐಸಿರಿ ಸಂಸ್ಥೆಯಲ್ಲಿ ಕೋಶಾಧಿಕಾರಿಯಾಗಿದ್ದರು. ಮಾತ್ರವಲ್ಲದೆ ತುಳು ವಿಕಿಪಿಡಿಯಾಗೆ ಲೇಖನಗಳನ್ನು ಬರೆದ ಅನುಭವ ಹೊಂದಿದ್ದಾರೆ.
ತುಳು ಕೂಟದ ಸ್ಥಾಪಕ ಅಧ್ಯಕ ಡಾ. ಭಾಸ್ಕರಾನಂದ ಕುಮಾರ್, ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಮಿತಿಯ ಸಂಚಾಲಕರಾದ ಶಿಲ್ಪಾ ಜೋಷಿ ಇವರೆಲ್ಲರೂ ತಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಅಕ್ಕರೆಯ ಸ್ವಾಗತವನ್ನು ಕೋರಿದ್ದಾರೆ.