ಮಂಗಳೂರು: ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಾಂಸ್ಕೃತಿಕ ವೇದಿಕೆಯಲ್ಲಿ ಕೊಟ್ಟಾರದ ‘ಭರತಾಂಜಲಿ’ಯ ವಿದುಷಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ ‘ನೃತ್ಯಾರ್ಪಣಂ’ ಮತ್ತು ‘ಪುಣ್ಯಕೋಟಿ’ ಎಂಬ ನೃತ್ಯರೂಪಕಗಳು ದಿನಾಂಕ 20-05-2023ರಂದು ಪ್ರದರ್ಶನಗೊಂಡವು.
ಪುಣ್ಯಕೋಟಿ ರೂಪಕದ ಹಾಡಿನ ಪ್ರತಿಯೊಂದು ವಾಕ್ಯಗಳಿಗೂ ಭಾವನೆಗಳನ್ನು ತುಂಬಿ ಅರ್ಥಪೂರ್ಣವಾಗಿ ಜನರ ಮುಂದೆ ಪ್ರದರ್ಶಿಸಿ ಮುಕ್ತ ಪ್ರಶಂಸೆಗೆ ಪಾತ್ರರಾದರು ಶ್ರೀಧರ ಹೊಳ್ಳ ದಂಪತಿಗಳು. ಹುಲಿಯ ಚಿತ್ರಣವನ್ನು ಯಕ್ಷ ಮತ್ತು ನಾಟ್ಯ ಶೈಲಿಯಲ್ಲಿ ಪ್ರದರ್ಶನ ಮಾಡಲಾಗಿದ್ದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಆಕರ್ಷಿಸಿತು.
ಗೋವನ್ನು ಆಧರಿಸಿರುವ ಈ ಕಥೆಯಲ್ಲಿ ಭಾವ-ಅನುಭಾವ, ತುಡಿತ-ಮಿಡಿತ, ಕೊನೆಗೆ ಹುಲಿರಾಯನ ಸಾವು ಎಲ್ಲವೂ ಅತ್ಯುತ್ತಮವಾಗಿ ಮೂಡಿ ಬಂದು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಕಥೆಯ ಪ್ರಮುಖ ಪಾತ್ರಗಳಾದ ಹುಲಿ ಮತ್ತು ಧೇನುವನ್ನು ಶ್ರೀಧರ ಹೊಳ್ಳ ಮತ್ತು ಪ್ರತಿಮಾ ಶ್ರೀಧರ್‌ರವರು ಆಭಿನಯಿಸಿ ಆ ಪಾತ್ರಗಳು ಅದ್ಭುತವಾಗಿ ಮೂಡಿ ಇಡಿ ರೂಪಕದ ಅಂದವನ್ನು ಹೆಚ್ಚಿಸಿತು.
ಕರುವಿನ ಪಾತ್ರಧಾರಿ ತಾಯಿ ಪುಣ್ಯಕೋಟಿಯೊಂದಿಗೆ ‘ಅಮ್ಮ ನೀನು ಸಾಯಲೇಕೆ ಎನ್ನ ತಬ್ಬಲಿ ಮಾಡಲೇಕೆ’ ಎಂಬ ಮಾತು, ಹುಲಿಯ ಕ್ರೌರ್ಯ, ರೌದ್ರ ಹಸಿವಿನ ವೇಳೆಗೆ ಸಿಕ್ಕಿದ್ದನ್ನು ಹಿಡಿಯುವ ರೀತಿ, ದನದ ಭರವಸೆಗೆ ಒಪ್ಪಿ ಕಳುಹಿಸುವಾಗ ಹುಲಿಯ ಪ್ರಾಣಿ ದಯಾಪರತೆ ನಂತರ ಕೊನೆಯಲ್ಲಿ ಧೇನುವಿಗಾಗಿ ಮಡಿಯುವ ಕರುಣಾದ್ರ ಸ್ಥಿತಿ ಎಲ್ಲವೂ ಭಾವ ತರಂಗಗಳಾಗಿ ಮೂಡಿಬಂತು.
ಅದಕ್ಕೆ ಪೂರಕವಾಗಿ ಕೊಟ್ಟ ಮಾತನ್ನು ಉಳಿಸುವ ಧೇನುವಿನ ಪಾತ್ರದಲ್ಲಿ ಪ್ರತಿಮಾ ಅವರ ಭಾವಪೂರ್ಣವಾದ ಅಭಿನಯ. ಕರು ಮತ್ತು ಧೇನುವಿನ ಮಧ್ಯೆ ಸಂಭಾಷಣೆ, ತಬ್ಬಲಿತನವನ್ನು ಮಗುವಿಗೆ ಅರ್ಥೈಸಿ ತನ್ನ ಅಕ್ಕ ತಂಗಿ ಧೇನುಗಳಿಗೆ ತನ್ನ ಕಂದನ ಹೊಣೆ ಹೊರಿಸಿ ಹೊರಡುವ ಗಂಭೀರತೆ. ಅತ್ಯಂತ ಪರಿಣಾಮಕಾರಿಯಾಗಿ ಧನಾತ್ಮಕ ಚಿಂತನೆಯಿಂದ ಈ ರೂಪಕ ಸಹೃದಯರ ಹೃದಯ ಮಿಡಿಯುವಂತೆ ಮಾಡಿತು.