ಕಾಸರಗೋಡು : ಕಲಾಕುಂಚ ದಾವಣಗೆರೆ ಸಂಸ್ಥೆಯ ಕಾಸರಗೋಡು ಗಡಿನಾಡು ಶಾಖೆಯ ವತಿಯಿಂದ 21-05-2023ರಂದು ಮಂಗಲ್ಪಾಡಿ ಶಾರದಾ ಭಜನಾ ಮಂದಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವ್ಯಂಗ್ಯ ಚಿತ್ರ ರಚನಾ ತರಬೇತಿ ಶಿಬಿರವು ನಡೆಯಿತು. ಖ್ಯಾತ ಕವಿ ಶ್ರೀ ವಿ.ಬಿ.ಕುಳಮರ್ವರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ವಿಶ್ರಾಂತ ಕನ್ನಡ ಪ್ರೊಫೆಸರ್ ಹಾಗೂ ಪ್ರಿನ್ಸಿಪಾಲ್ ಶ್ರೀ ಪಿ.ಎನ್ ಮೂಡಿತ್ತಾಯರವರು ಸುಂದರವಾದ ರೇಖಾ ಚಿತ್ರವೊಂದನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿರಾಜ್ ಅಡೂರು ಅವರು ತರಬೇತಿ ನೀಡಿದರು. ಕಲಾಕುಂಚ ಕೇರಳ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ಶ್ರೀ ರಾಮ ಕಾರಂತ್ ಕೋರ್ತಿಮಾರು ಉಪಸ್ಥಿತರಿದ್ದರು.
ಶ್ರೀಮತಿ ಶಶಿಕಲಾ ಮಯ್ಯ ಸ್ವಾಗತಿಸಿ, ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ವಂದಿಸಿದರು. ಸಾಧಾರಣ ಇಪ್ಪತ್ತೊಂದು ಮಕ್ಕಳು ಶಿಬಿರಾರ್ಥಿಗಳಾಗಿ ಆಸಕ್ತಿಯಿಂದ ಭಾಗವಹಿಸಿದ್ದ, ಅದೊಂದು ಸುಂದರ ಶಿಬಿರ ಮತ್ತು ಬೇಸಿಗೆಯ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಈ ರೀತಿಯ ಶಿಬಿರಗಳು ಸಹಕಾರಿ.
ಶ್ರೀ ವಿರಾಜ್ ಅಡೂರು ಸರ್ ರವರು ಮಕ್ಕಳಿಗೆ ವ್ಯಂಗ್ಯಚಿತ್ರ ಅಂದರೆ ಏನು, ಅದನ್ನು ಸರಳ ರೇಖೆಗಳ ಮೂಲಕ ಹೇಗೆ ರಚಿಸಬಹುದು ಎಂಬುದನ್ನು ಹೇಳಿಕೊಟ್ಟರು. ಮಕ್ಕಳಿಗೆಲ್ಲಾ ಒಂದು ಆನೆಯ ಚಿತ್ರ, ಅದರ ಮೇಲೆ ಸವಾರ ಇರುವಂತೆ ಬಿಡಿಸಲು ಹೇಳಿದರು. ಅತ್ಯುತ್ತಮವಾಗಿ ರಚಿಸಿದ ಶಿಬಿರಾರ್ಥಿಗೆ ಪುಸ್ತಕ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಎರಡು ತಂಡಗಳ ಮಧ್ಯೆ ರಸಪ್ರಶ್ನೆ ಸ್ಪರ್ಧೆಯೂ ನಡೆಯಿತು. ಕಾರ್ಯಕ್ರಮದ ಅವಲೋಕನೆಯ ಕುರಿತಾಗಿ ಸ್ಪರ್ಧೆಯನ್ನು ಶ್ರೀಮತಿ ಜಯಲಕ್ಷ್ಮಿ ಕಾರಂತ್ ನಡೆಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ವಿಜೇತರಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು. ಬಹುಮಾನ ವಿಜೇತರು : ರಸಪ್ರಶ್ನೆ : ದೇವಾಂಶು ಕಾರಂತ, ಚಿತ್ರರಚನೆ: ಶಾಶ್ವತ್ ವಿ.ಎ, ಹಾಗೂ ಉತ್ತಮ ಶಿಬಿರಾರ್ಥಿ: ಶಿವ ಚಂದನ ನಾವಡ. ಶ್ರೀ ವಿರಾಜ್ ಅಡೂರು ಇವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಶಶಿಕಲಾ ಮಯ್ಯರವರು ನಿರ್ವಹಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.