ಕಾಸರಗೋಡು: ರಂಗ ಚಿನ್ನಾರಿಯ ಅಂಗ ಸಂಸ್ಥೆಯಾದ ನಾರಿ ಚಿನ್ನಾರಿಯ 5ನೆಯ ಸರಣಿ ಕಾರ್ಯಕ್ರಮ ‘ವೈಶಾಖ ಲಹರಿ’ಯು ದಿನಾಂಕ 20-05-2023ರಂದು ಎಡನೀರಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರಗಿತು. ಸಭಾ ಕಾರ್ಯಕ್ರಮ ಆರಂಭವಾಗುವ ಮೊದಲು ಸುದೀರ್ಘಕಾಲ ಸೂಲಗಿತ್ತಿಯಾಗಿ ಕತ೯ವ್ಯ ನಿವ೯ಹಿಸಿ ಸೇವೆಯಿಂದ ನಿವೃತ್ತರಾದ ಬಳಿಕವೂ ಸಮಾಜ ಸೇವೆಯಲ್ಲಿ ಪ್ರವೃತ್ತರಾಗಿ ಪ್ರಸ್ತುತ ವಯೋಸಹಜ ಅನಾರೋಗ್ಯದಿಂದಿರುವ ಎಡನೀರು ನಿವಾಸಿ ಕಮಲಮ್ಮನವರನ್ನು ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರಂಗ ಚಿನ್ನಾರಿಯ ಕಾಸರಗೋಡು ಚಿನ್ನಾ, ಕೋಳಾರು ಸತೀಶ್ ಚಂದ್ರ ಭಂಡಾರಿ, ಸತ್ಯನಾರಾಯಣ ಮಾಸ್ಟರ್, ನಾರಿ ಚಿನ್ನಾರಿಯ ಸವಿತಾ ಟೀಚರ್, ತಾರಾ ಜಗದೀಶ್, ದಿವ್ಯಾ ಗಟ್ಟಿ ಮತ್ತಿತರರು ಹಾಗೂ ಕಮಲಮ್ಮನವರ ಕುಟುಂಬದವರು ಉಪಸ್ಥಿತರಿದ್ದರು.
ಮುಂದೆ ನಡೆದ ಸಭಾ ಕಾರ್ಯಕ್ರಮವು ಪೂಜಾ ಅವರ ಪ್ರಾಥ೯ನೆಯ ಮೂಲಕ ಆರಂಭಗೊಂಡಿತು. ಸಂಗೀತ ವಿದುಷಿ ಶ್ರೀಮತಿ ಉಷಾ ಈಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಚಾಲನೆಯನ್ನು ನೀಡಿದರು. ವಿದುಷಿ ಮತ್ತು ಖ್ಯಾತ ಅಭಿನೇತ್ರಿ ಮಾನಸಿ ಸುಧೀರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಾಂಸ್ಕೃತಿಕ ಕೇಂದ್ರ ಎಡನೀರಿನಲ್ಲಿ ನಡೆಯುವ ರಂಗ ಚಿನ್ನಾರಿ ಹಾಗೂ ನಾರಿ ಚಿನ್ನಾರಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರ್ಷವಿದೆ ಎಂದರು. ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು ಆಶೀವ೯ಚನ ನೀಡಿ ರಂಗ ಚಿನ್ನಾರಿಯು ನಾರಿಚಿನ್ನಾರಿಯ ಮೂಲಕ ನಡೆಸುತ್ತಿರುವ ಚಟುವಟಿಕೆಗಳನ್ನು ಶ್ಲಾಘಿಸಿದರು.
ಹಲವು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಲ್ಲದೆ ಶಿಷ್ಯವೃಂದವನ್ನೂ ಸಮಾಜಕ್ಕೆ ನೀಡಿದ ಕಾಸರಗೋಡಿನ ಹಿರಿಯ ಸಾಧಕಿ ರಾಧಾ ಮುರಳೀಧರ್ ಅವರಿಗೆ ಹೂ ಕುಂಕುಮ ಹಾರ, ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸ್ನೇಹಲತಾ ದಿವಾಕರ್ ಗೌರವ ಸ್ವೀಕರಿಸಿದ ಸಾಧಕಿಯರ ಬಗ್ಗೆ ಮಾತನಾಡಿದರು. ನಿವೃತ್ತ ಅಧ್ಯಾಪಿಕೆ, ಸಮಾಜ ಸೇವಕಿ ಶಾಂತಾ ಟೀಚರ್ ಶುಭಾಶಂಸನೆಗೈದರು. ಗೌರವಾಧ್ಯಕ್ಷೆ ತಾರಾ ಜಗದೀಶ್ ಅವರ ಉಪಸ್ಥಿತಿಯಲ್ಲಿ ಸವಿತಾ ಟೀಚರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಭರವಸೆಯ ಕವಯಿತ್ರಿ ಶ್ರದ್ದಾ ಹೊಳ್ಳ ಮುಳಿಯಾರು ಅವರ ಹನಿಗವನಗಳ ಸಂಕಲನ ‘ಮಾತು-ಮೌನ’ವನ್ನು ಸ್ವಾಮೀಜಿಯವರು ಅನಾವರಣಗೊಳಿಸಿ ಹರಸಿದರು.
ನಾರಿಚಿನ್ನಾರಿಯ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮವನ್ನು ನಿರೂಪಿಸಿದರು. ಸವ೯ಮಂಗಳಾ ಸ್ವಾಗತಿಸಿ ವಿಜಯಲಕ್ಷ್ಮೀ ಶಾನುಭೋಗ್ ಧನ್ಯವಾದವಿತ್ತರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ವೈವಿಧ್ಯ ಪೂಣ೯ವಾಗಿ ರಂಜಿಸಿತು. ಪ್ರತ್ನಸ ಲಕ್ಷ್ಮೀ ಕೂಡ್ಲು (ಸಂಸ್ಕೃತ ಸುಭಾಷಿತ ಅಥ೯ಕಥನ), ಅದಿತಿ ಲಕ್ಷ್ಮೀ (ಭರತನಾಟ್ಯ) ನೇಹಾ ರಮೇಶ್ (ಮೋಹಿನಿಯಾಟ್ಟಂ), ಅಪಣ೯ ಪಾಣೂರು (ಹರಿಕಥೆ), ಅಸಾವರಿ ಹೊಸಂಗಡಿ (ಶಾಸ್ತ್ರೀಯ ನೃತ್ಯ), ವೈಷ್ಣವಿ ಎಡನೀರು (ಕಾವ್ಯಾಲಾಪನೆ), ಹಿಮಜಾ ಬಾಯಿ (ಜಾನಪದ ನೃತ್ಯ) ಸಹನಾ ಎಡನೀರು (ಭಾವಗೀತೆ) ವನಜಾಕ್ಷಿ ಚಂಬ್ರಕಾನ (ತುಳು ಕವನವಾಚನ) ಪ್ರಭಾವತಿ ಕೆದಿಲಾಯ (ಏಕ ಪಾತ್ರಾಭಿನಯ) ಇವರು ನೆರೆದಿದ್ದ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.