ಮಂಗಳೂರು: ‘ಸರಯೂ ಬಾಲ ಯಕ್ಷ ವೃಂದ ಕೋಡಿಕಲ್’ ಇವರು ಕದ್ರಿ ದೇವಸ್ಥಾನ ಸಹಕಾರದೊಂದಿಗೆ ನಡೆಯುವ ಸರಯೂ ಬಾಲ ಯಕ್ಷ ವೃಂದದ 23ನೇ ವರ್ಷದ ಸಪ್ತಾಹವನ್ನು ದಿನಾಂಕ 25-05-2023ರಂದು ವೇದಮೂರ್ತಿ ನರಸಿಂಹ ತಂತ್ರಿಗಳು ಶ್ರೀ ಕ್ಷೇತ್ರ ಕದ್ರಿ ದೇವಳದ ರಾಜಾಂಗಣದಲ್ಲಿ ಉದ್ಘಾಟಿಸುತ್ತಾ “ಯಕ್ಷಗಾನವು ಸರ್ವರನ್ನೂ ತಲಪುವ ರಂಗ ಕಲೆ, ಹಿರಿಯರಿಂದಾರಂಭಿಸಿ ಕಿರಿಯರವರೆಗೂ ಅದು ಸರ್ವವ್ಯಾಪಿಯಾಗಿ ಆಕರ್ಷಿಸುತ್ತಿದೆ. ಹೊಸ ಚಿಗುರು ಚಿಣ್ಣರು ಸರಯೂ ಸಂಸ್ಥೆಯ ಮೂಲಕ ಜಗತ್ತಿಗೇ ಪರಿಚಯಿಸಲ್ಪಡುತ್ತಾರೆ. 23 ವರ್ಷಗಳಿಂದ ಅನೇಕ ವಿದ್ಯಾರ್ಥಿಗಳು ರಂಗಕ್ಕೆ ಪರಿಚಯಿಸಲ್ಪಟ್ಟಿದ್ದಾರೆ. ಮೇಳಗಳಲ್ಲೂ ಕಲಾವಿದರಾಗಿ ಕಲಾಸೇವೆ ನಡೆಸುತ್ತಿದ್ದಾರೆ. ಪತ್ತನಾಜೆಯ ಈ ದಿನದಿಂದಾರಂಭವಾಗುವ ಈ ಮಕ್ಕಳ ಮೇಳಕ್ಕೆ ಸಪ್ತಾಹಕ್ಕೆ ಶುಭ ಕೋರುತ್ತೇನೆ” ಎಂದು ಕಿಶೋರರಿಗೆ ಶುಭವನ್ನು ಕೋರಿದರು.
ಸಂಸ್ಥೆಯ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು “ಸಂಸ್ಥೆಯ ಏಳು-ಬೀಳುಗಳನ್ನು ವಿವರಿಸುತ್ತಾ ಕಲೆಗೆ ರಾಜಾಶ್ರಯ ಬೇಕು. ಆ ಕಾರ್ಯವನ್ನು ಸಜ್ಜನ ಕಲಾಪೋಷಕರು ಮಾಡಬೇಕು. ಸರಯೂ ಸಂಸ್ಥೆಯನ್ನು ಎಲ್ಲರೂ ಸೇರಿ ಬೆಳೆಸೋಣ” ಎಂದರು.
ಮುಖ್ಯ ಅತಿಥಿಗಳಾಗಿ ಎಸ್.ಸಿ ಎಸ್. ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಶ್ರೀಪತಿ ರಾವ್, ಯಕ್ಷ ಮಂಜುಳಾದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ”ಕೇಶವ ಕೋಡಿಕಲ್, ಸಂಸ್ಥೆಯ ಅಧ್ಯಕ್ಷ ಮಧುಸೂದನ ಅಲೆವೂರಾಯ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ತಂತ್ರಿವರೇಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ಸದಸ್ಯ ವೃಷಭ್ ಜಿ.ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ವರ್ಕಾಡಿ ರವಿ ಅಲೆವೂರಾಯ ಸ್ವಾಗತ-ಪ್ರಸ್ತಾವನೆ ನಡೆಸಿ, ಸುಧಾಕರ ರಾವ್ ಪೇಜಾವರ ನಿರ್ವಹಿಸಿ, ವರ್ಕಾಡಿ ಶ್ರೀ ಮಾಧವ ನಾವಡ ಧನ್ಯವಾದವಿತ್ತರು. ಬಳಿಕ ಪ್ರಸಿದ್ಧ ಕಲಾವಿದರು ಮತ್ತು ಸಂಸ್ಥೆಯ ಛಾತ್ರರಿಂದ ವಿಜಯದ್ವಯ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.