ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ, ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಮತ್ತು ಅಜ್ಜರಕಾಡು ಸಾಹಿತ್ಯ ಸಂಘದ ಸಹಯೋಗದಲ್ಲಿ ದಿನಾಂಕ 24-05-2023ರಂದು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಗಣನಾಥ ಶೆಟ್ಟಿ ಎಕ್ಕಾರು “ರಾಣಿ ಅಬ್ಬಕ್ಕ ತುಳುನಾಡಿನಲ್ಲಿ ಕೇವಲ ಪ್ರತಿಮೆಯಾಗಿ ಉಳಿದಿಲ್ಲ ಮಹಿಳಾ ಸ್ವಾಭಿಮಾನದ ಸಂಕೇತವಾಗಿ ತುಳುವರ ಬದುಕಿನ ಭಾಗವಾಗಿ ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಳ್ಳುವ ವೀರ ಮಹಿಳೆ” ಎಂದು ಅಭಿಪ್ರಾಯಪಟ್ಟರು.
ಪ್ರೊ. ಭಾಸ್ಕರ ಶೆಟ್ಟಿ ಎಸ್. ಇವರ ಅಧ್ಯಕ್ಷತೆಯಲ್ಲಿ ‘ರಾಣಿ ಅಬ್ಬಕ್ಕ ಮತ್ತು ತುಳುನಾಡಿನ ಸಾಂಸ್ಕೃತಿಕ ಅನನ್ಯತೆ’ ಎಂಬ ವಿಷಯದ ಕುರಿತು ಡಾ.ಜ್ಯೋತಿ ಚೇಳಾಯರು ಉಪನ್ಯಾಸ ನೀಡಿದರು. ತುಳುನಾಡಿನಲ್ಲಿ ಸಮೃದ್ಧ ಜಾನಪದ ಇತಿಹಾಸ ಇದೆ. ಆದರೆ, ತುಳುನಾಡಿನ ಪಾಡ್ಡನಗಳಲ್ಲಿ ಎಲ್ಲಿಯೂ ಅಬ್ಬಕ್ಕ ರಾಣಿಯ ಕುರಿತು ಪ್ರಸ್ತಾಪ ಬಾರದಿರಲು ಕಾರಣ ಏನು ಎಂಬ ಪ್ರಶ್ನೆಯನ್ನು ಮುಂದಿಟ್ಟರು.
ವಿದ್ಯಾರ್ಥಿ ಪ್ರತಿನಿಧಿ ಮಂಗಳ ಗೌರಿ ‘ತುಳುನಾಡಿನ ಮಹಿಳಾ ಸಬಲೀಕರಣದಲ್ಲಿ ರಾಣಿ ಅಬ್ಬಕ್ಕ’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದರು.
ಡಾ.ಸೌಮ್ಯಲತಾ ಪಿ. ಮತ್ತು ರೇವತಿ ಬರೆದ ‘ಮಹಿಳಾ ಪದ’ ಎನ್ನುವ ಕವನ ಸಂಕಲನ ಬಿಡುಗಡೆಯಾಯಿತು. ರಾಷ್ಟ್ರಮಟ್ಟದ ವೈಚಾರಿಕ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಡಗ ಎಕ್ಕಾರು ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಯನಾ ಅವರನ್ನು ಅಭಿನಂದಿಸಲಾಯಿತು.
ಪ್ರೊ. ಸೋಜನ್ ಕೆ.ಜಿ., ಬಡಗ ಎಕ್ಕಾರು ಪ್ರೌಢಶಾಲೆಯ ಅಧ್ಯಾಪಕಿ ಚಿತ್ರಶ್ರೀ ಉಪಸ್ಥಿತರಿದ್ದರು. ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಿಕೇತನ ವಂದಿಸಿ, ಡಾ.ಪಿ.ಬಿ.ಪ್ರಸನ್ನ ನಿರೂಪಿಸಿದರು.