ಉಡುಪಿ : ದಿನಾಂಕ 13-05-2023ರಂದು ಸಂಜೆ ಮಿತ್ರಮಂಡಳಿ ಕೋಟ ವತಿಯಿಂದ ಪ್ರೊ. ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ಶ್ರೀಲೋಲ ಸೋಮಯಾಜಿಯವರ ಧಾರವಾಡದ ರಾಘವೇಂದ್ರ ಪಾಟೀಲ ಕಥಾಸಪ್ರಶಸ್ತಿ-2022 ವಿಜೇತ ಕೃತಿ ‘ನ ಪ್ರಮದಿತವ್ಯಮ್’ ಲೋಕಾರ್ಪಣೆಗೊಂಡಿತು. ವಿಜ್ಞಾನಿ ನಾಡೋಜ ಶ್ರೀ ಕೆ.ಪಿ.ರಾಯರು ಕೃತಿ ಬಿಡುಗಡೆ ಮಾಡಿದರು. ಡಾ. ಅನಿಲ ಕುಮಾರ್ ಶೆಟ್ಟಿಯವರು ಪುಸ್ತಕ ಪರಿಚಯ ಮಾಡುತ್ತಾ “ಬಾಲ್ಯದಲ್ಲಿ ಪರಿಸರದಿಂದ ಗಾಢವಾದ ಅನುಭವಗಳಿಗೆ ಸಮಕಾಲೀನ ಸಂದರ್ಭಗಳು ಅನುಕೂಲಕರವಾಗಿ ಮೇಳೈಸಿದಾಗ ಪರಿಣಾಮಕಾರಿಯಾದ ಕತೆಗಳು ಹುಟ್ಟುತ್ತವೆ ಎಂಬುದಕ್ಕೆ ಈ ಕೃತಿ ಸಾಕ್ಷಿ” ಎಂದರು. ಇದೇ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಪುಸ್ತಕ ಪ್ರಕಾಶಕ ಮೈಸೂರಿನ ಸಂಸ್ಕೃತಿ ಸುಬ್ರಹ್ಮಣ್ಯರನ್ನು ಗೌರವಿಸಲಾಯಿತು.
ಧಾರವಾಡದ ರಾಘವೇಂದ್ರ ಪಾಟೀಲ ಕಥಾ ಸ್ಪರ್ಧೆಯ ಪ್ರಥಮ ಬಹುಮಾನಿತ ಕೃತಿ ‘ನ ಪ್ರಮದಿತವ್ಯಮ್’ ಕಥಾಸಂಕಲನದಲ್ಲಿಯ ಸಂಗೀತ ಸಂಬಂಧಿ ಕತೆಯೊಂದು ತನ್ನ ಪದುಮನಾಭನ ಧ್ಯಾನದಲ್ಲಿಯ ಒಂದು ಪ್ರಸಂಗಕ್ಕೆ ಸಂವಾದಿಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ನಾಡೋಜ ಕೆ.ಪಿ.ರಾಯರು ಸ್ಮರಿಸಿಕೊಂಡರು. ಸಾಹಿತಿ ಚಿತ್ರಪಾಡಿ ಪ್ರೊ. ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗೋಡು ರಮೇಶ ಭಟ್ಟರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಮಹಾಲಕ್ಷ್ಮಿಯವರಿಂದ ನಿರ್ವಹಣೆ, ಅಮೋಘ ಸೋಮಯಾಜಿಯವರಿಂದ ಪ್ರಾರ್ಥನೆ, ಶ್ರೀಲೋಲರಿಂದ ವಂದನಾರ್ಪಣೆ ನಡೆಯಿತು.
ಕೃತಿ ಕರ್ತೃ – ಶ್ರೀ ಶ್ರೀಲೋಲ ಸೋಮಯಾಜಿಯವರ ಬಗ್ಗೆ :
ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸೀನಿಯರ್ ಪ್ರಿನ್ಸಿಪಲ್ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಪ್ರಸ್ತುತ ಉದ್ಯೋಗದಲ್ಲಿರುವ ಕತೆಗಾರರು ತಮ್ಮ ಪದವಿ ಪೂರ್ವದವರೆಗಿನ ವಿದ್ಯಾಭ್ಯಾಸಗಳನ್ನು ಹುಟ್ಟೂರಾದ ಉಡುಪಿ ಜಿಲ್ಲೆಯ ಕೋಟದಲ್ಲಿ ಮುಗಿಸಿ, ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಗಳಿಸಿರುವರು. ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಮಕ್ಕಳ ಯಕ್ಷಗಾನ ಮೇಳದ ಮೂಲಕ ಯಕ್ಷಗಾನವನ್ನು ಅಭ್ಯಸಿಸಿರುವ ಇವರು ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇವರ ಹಲವು ಕತೆಗಳು ತುಷಾರ, ಕನ್ನಡ ಪ್ರಭಗಳಲ್ಲಿ ಪ್ರಕಟವಾಗಿವೆ. ವರ್ತಮಾನ.ಕಾಮ್ ನವರು ಆಯೋಜಿಸಿದ ಗಾಂಧಿಜಯಂತಿ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನ, ನಾವಿಕ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಉತ್ಥಾನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆಯ ಬಹುಮಾನಗಳನ್ನು ಇವರ ಕತೆಗಳು ಪಡೆದಿವೆ. ಇವರು ಬರೆದಿರುವ ಟಿ.ಎ. ಪೈಯವರ ಪರಿಚಯ ಹೊತ್ತಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಪ್ರಕಟವಾಗಿದೆ. ಪ್ರಶಸ್ತಿಯನ್ನು ಪಡೆದಿರುವ ‘ನ ಪ್ರಮದಿತವ್ಯಂ’ ಕತೆಗಾರರ ಚೊಚ್ಚಲ ಕಥಾಸಂಕಲನವಾಗಿದೆ.