ಉಡುಪಿ : ರಂಗ ಭೂಮಿ ಉಡುಪಿಯು ದಿ. ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಆಯೋಜಿಸುವ ‘ರಂಗ ಭೂಮಿ ಆನಂದೋತ್ಸವ -2023’ ಕಾರ್ಯಕ್ರಮವು ಜೂನ್ 3 ಹಾಗೂ 4ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ದಿನಾಂಕ 03-06-2023ರಂದು ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಉಡುಪಿ ಶಾಸಕರಾದ ಶ್ರೀ ಯಶ್‌ಪಾಲ್ ಎ. ಸುವರ್ಣ ಇವರು ಉದ್ಘಾಟಿಸಲಿದ್ದು, ಉಡುಪಿಯ ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಣಿಪಾಲದ ಆಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಕಾರ್ಯದರ್ಶಿಯಾದ ಶ್ರೀ ಬಿ.ಪಿ. ವರದರಾಯ ಪೈ, ಉಡುಪಿಯ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಎ.ಜಿ.ಎಂ. ಶ್ರೀ ರಾಜಗೋಪಾಲ ಬಿ., ಯುವ ಉದ್ಯಮಿ ಶ್ರೀ ಮಿಥುನ್ ಆರ್. ಹೆಗ್ಡೆ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀನಗರದ ಶ್ರೀ ಕುತ್ಪಾಡಿ ಜಗನ್ನಾಥ ಗಾಣಿಗ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ನಿವೃತ್ತ ಎಂ.ಡಿ. ಹಾಗೂ ಕರ್ನಾಟಕ ಬ್ಯಾಂಕಿನ ಸಿ.ಇ.ಓ. ಶ್ರೀ ಮಹಾಬಲೇಶ್ವರ ಎಂ.ಎಸ್. ಇವರಿಗೆ ಗೌರವ ಸಂಮಾನ ನಡೆಯಲಿದೆ.
ಸಭಾ ಕಾರ್ಯಕ್ರಮದ ನಂತರ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಮತ್ತು ಕಲಾಭಿ ಥಿಯೇಟರ್ ಪ್ರಸ್ತುತಪಡಿಸುವ ಪ್ರಶಾಂತ್ ಉದ್ಯಾವರ ರಂಗಪಠ್ಯ ಮತ್ತು ನಿರ್ದೇಶನದ ಶ್ವೇತಾ ಅರೆಹೊಳೆ ಮತ್ತು ತೃಷಾ ಶೆಟ್ಟಿ ಅಭಿನಯಿಸುವ ‘ಧ್ವಯ’ ನಾಟಕ ಪ್ರದರ್ಶನಗೊಳ್ಳಲಿದೆ.
.
ದಿನಾಂಕ 04-06-2023ರಂದು ‘ರಂಗಭೂಮಿ ಆನಂದೋತ್ಸವ’ದ ಎರಡನೇ ದಿನದ ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.) ಪ್ರಾಯೋಜಿತ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ‘ಸಂಸ್ಕೃತಿ ಸಾಧಕ ಪ್ರಶಸ್ತಿ’ಯನ್ನು ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳರಿಗೆ ಪ್ರದಾನ ಮಾಡಲಾಗುವುದು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಮಾಹೆ, ಟೆಕ್ನಾಲಜಿ & ಸೈನ್ಸ್ ಇದರ ಸಹ ಉಪ ಕುಲಪತಿಯಾದ ಡಾ. ನಾರಾಯಣ ಸಭಾಹಿತ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಮಾಜಿ ಶಾಸಕರಾದ ಶ್ರೀ ಕೆ. ರಘಪತಿ ಭಟ್, ಮಣಿಪಾಲದ ಕೆ.ಎಂ.ಸಿ.ಯ ಡೀನ್ ಡಾ. ಪದ್ಮರಾಜ ಹೆಗ್ಡೆ, ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಹಾಗೂ ರಂಗ ನಿರ್ದೇಶಕರಾದ ಡಾ. ಶ್ರೀಪಾದ ಭಟ್ ಭಾಗವಹಿಸಲಿದ್ದಾರೆ. ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಶ್ರೀಮತಿ ಗಿರಿಜಾ ಶಿವರಾಮ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರಗಲಿದೆ.
ಸಭಾ ಕಾರ್ಯಕ್ರಮದ ನಂತರ ನಟನ ಮೈಸೂರು ತಂಡದವರಿಂದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಅತೊಲ್ ಫ್ಯೂಗಾರ್ಡ್ ರಚಿಸಿದ್ದು ಡಾ. ಮೀರಾ ಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೇಘ ಸಮೀರ ಮತ್ತು ದಿಶಾ ರಮೇಶ್ ನಟಿಸುವ ನಾಟಕಕ್ಕೆ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಸಂಗೀತ ನೀಡಲಿದ್ದು, ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ನಾಡಿನ ಹೆಸರಾಂತ ನಿರ್ದೇಶಕ ಡಾ. ಶ್ರೀಪಾದ ಭಟ್ ಇವರದ್ದು.
ಕುತ್ಪಾಡಿ ಆನಂದ ಗಾಣಿಗರು
ಬಹುಮುಖ ಪ್ರತಿಭೆಯ ದಿ. ಕುತ್ಪಾಡಿ ಆನಂದ ಗಾಣಿಗರು ಕರಾವಳಿ ಕರ್ನಾಟಕದ ಹವ್ಯಾಸಿ ರಂಗಭೂಮಿಯ ಜೀವಂತ ಪ್ರಜ್ಞೆಯಾಗಿರುವ ರಂಗಭೂಮಿ (ರಿ.) ಉಡುಪಿ ಈ ಸಂಸ್ಥೆಯ ಸ್ಥಾಪಕರಲ್ಲೋರ್ವರು ನಟ, ನಾಟಕಕಾರ, ನಿರ್ದೇಶಕ, ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ 1965ರಿಂದ 2010ರವರೆಗೆ ನಿರಂತರ 45 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದವರು.
ಚಲನಚಿತ್ರ ನಟ, ಲೇಖಕ, ಯಕ್ಷಗಾನ ತಾಳಮದ್ದಲೆ ಕಲಾವಿದ, ವಾಗ್ಮಿ, ಆಕಾಶವಾಣಿ ಕಲಾವಿದ, ಪತ್ರಕರ್ತ, ಅಂಕಣಕಾರ, ಸಂಘಟನಾ ಚತುರ ಕೆ. ಆನಂದ ಗಾಣಿಗರು ನಮ್ಮ ನೆನಪಿನಲ್ಲಿ ಎಂದೆಂದೂ ಇರುತ್ತಾರೆ. 1994-95ರ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕಾರ, ಬಳಿಕ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಭಾರ್ಗವ ಪ್ರಶಸ್ತಿಗಳಿಗೆ ಪಾತ್ರರಾದ ಇವರು ಮೈಸೂರಿನ ರಂಗಾಯಣದ ಆಡಳಿತ ಸಲಹಾ ಮಂಡಳಿಯ ಸದಸ್ಯತ್ವ. ಅನೇಕ ಸಂಘ ಸಂಸ್ಥೆಗಳಿಂದ ಅಸಂಖ್ಯ ಪ್ರಶಸ್ತಿಗಳ ಸರದಾರರಾಗಿದ್ದ ಕೆ. ಆನಂದ ಗಾಣಿಗರು ‘ರಂಗಭೂಮಿ’ ಸಂಸ್ಥೆಯಲ್ಲದೆ ಇನ್ನಿತರ ಬಹಳಷ್ಟು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಆಗಿ ಅವುಗಳ ಅಭಿವೃದ್ಧಿಗೂ ಕಾರಣರಾಗಿದ್ದರು.
ಜೀವ ವಿಮಾ ನಿಗಮ ಉದ್ಯೋಗವು ವೃತ್ತಿಯಾಗಿದ್ದರೂ, ಪ್ರವೃತ್ತಿಯಾದ ರಂಗಭೂಮಿಯೇ ಅವರಿಗೆ ಉಸಿರಾಗಿತ್ತು. ರಂಗ ಭೂಮಿಯ ಮುನ್ನಡೆಗೆ ಅಡ್ಡಿಯಾಗಬಾರದೆಂಬ ಕಾಳಜಿಯಿಂದ ತನ್ನ ಉದ್ಯೋಗದಲ್ಲಿ ನಿರಾಯಾಸವಾಗಿ ದೊರೆತ ಪದೋನ್ನತಿಯನ್ನು ವಿನಮ್ರವಾಗಿ ತ್ಯಜಿಸಿದ ಮಹಾತ್ಯಾಗಿ ಆನಂದ ಗಾಣಿಗರು. ರಂಗಭೂಮಿ’ ಎಂದರೆ ಆನಂದ ಗಾಣಿಗ, ಆನಂದ ಗಾಣಿಗೆ ಎಂದರೆ ‘ರಂಗಭೂಮಿ’ ಎನ್ನುವಷ್ಟರ ಮಟ್ಟಿಗೆ ರಂಗಭೂಮಿಯ ಅವಿಭಾಜ್ಯ ಅಂಗವಾಗಿದ್ದರು. ಕೆ. ಆನಂದ ಗಾಣಿಗರು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಉಡುಪಿ ರಂಗಭೂಮಿಗೆ ಅಚ್ಚಳಿಯದ ಸ್ಥಾನ ದೊರಕಿಸಿಕೊಟ್ಟ ಅದ್ಭುತ ಕಲಾವಿದರು. ಅವರ ಸಂಘಟನಾ ಚಾತುರ್ಯ ಎಷ್ಟೋ ಸಂಘ ಸಂಸ್ಥೆಗಳಿಗೆ ಅನುಕರಣೀಯವಾಗಿದೆ. ಆನಂದ ಗಾಣಿಗರ ಅದ್ಭುತ ಸ್ಮರಣಶಕ್ತಿ ಹಾಗೂ ಅರ್ಪಣಾಭಾವ, ರಂಗಭೂಮಿ ಸಂಸ್ಥೆಗೆ ಅವರು ಹಾಕಿಕೊಟ್ಟ ಭದ್ರ ಬುನಾದಿ ಹಾಗೂ ಸಾಂಸ್ಕೃತಿಕ ಪರಂಪರೆಯು ಅವರನ್ನು ಪ್ರಾತಃ ಸ್ಮರಣೀಯರನ್ನಾಗಿಸಿದೆ, ಗಾಣಿಗರ ದಿವ್ಯ ಆತ್ಮಕ್ಕೆ ‘ರಂಗಭೂಮಿ’ಯ ನಮೋ ನಮಃ.
ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ‘ಸಂಸ್ಕೃತಿ ಸಾಧಕ ಪ್ರಶಸ್ತಿ’
‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ನಾಣ್ಣುಡಿಯಂತೆ ಕಲೆ-ಸಾಹಿತ್ಯ ಹಾಗೂ ಸಾಮಾಜಿಕ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸದುದ್ದೇಶದಿಂದ ತಲ್ಲೂರು ಡಾ. ಶಿವರಾಮ ಶೆಟ್ಟಿಯವರು ಸ್ಥಾಪಿಸಿರುವ ಸಂಸ್ಥೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.). ಈ ಸಂಸ್ಥೆಯು ಹೊರ ತಂದಿರುವ ಹಲವಾರು ಶ್ರೇಷ್ಠ ಪುಸ್ತಕಗಳು ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಜಾನಪದ ಅಕಾಡೆಮಿ ಇನ್ನೂ ಹಲವು ಸಂಸ್ಥೆಗಳಿಂದ ಪುರಸ್ಕೃತಗೊಂಡಿವೆ.
ಈ ಟ್ರಸ್ಟಿನ ಮತ್ತೊಂದು ಕಲಾಸೇವೆಯೇ ಈ ಪ್ರಶಸ್ತಿ. ಯಕ್ಷಗಾನ-ನಾಟಕ ತಾಳ ಮದ್ದಲೆ-ರೇಡಿಯೋ ನಾಟಕಗಳ ಕಲಾವಿದರಾಗಿ, ಅಂಕಣಕಾರರಾಗಿ, ಲೇಖಕರಾಗಿ, ಸಂಘಟಕರಾಗಿ, ಸಿನಿಮಾ ಕಲಾವಿದರಾಗಿ ಹೀಗೆ ತನ್ನ ಬಹುಮುಖ ವ್ಯಕ್ತಿತ್ವದಿಂದ ಉಡುಪಿ ಹಾಗೂ ಕರ್ನಾಟಕದ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದಿ. ಕುತ್ಪಾಡಿ ಆನಂದ ಗಾಣಿಗರ ನೆನಪಿನಲ್ಲಿ ಅವರ ಓರ್ವ ಆತ್ಮೀಯ ಗೆಳೆಯನಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ತನ್ನ ಟ್ರಸ್ಟ್ ಕೊಡಮಾಡುವ ಈ ಪ್ರಶಸ್ತಿಯನ್ನು ‘ರಂಗಭೂಮಿ’ಯ ಮೂಲಕ 2018ರಿಂದ ನೀಡುತ್ತಾ ಬಂದಿರುತ್ತಾರೆ.
ಹಲವು ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಹಿರಿಯರನ್ನು ಗೌರವಿಸುವುದು ತಲ್ಲೂರ್ ಫ್ಯಾಮಿಲ ಟ್ರಸ್ಟ್ (ರಿ.) ಹಾಗೂ ರಂಗಭೂಮಿ (ರಿ.) ಉಡುಪಿಯ ಮೂಲ ಉದ್ದೇಶ.
ಕಲಾಪೋಷಕ ಡಾ. ನಿ.ಬೀ ವಿಜಯ ಬಲ್ಲಾಳ್ ಮಾಡಿರುವ ಜನಪರ ಸೇವೆಗಳಿಗಾಗಿ ಈ ಬಾರಿ ಈ ಪ್ರಶಸ್ತಿಯನ್ನು ನೀಡಿ ‘ರಂಗಭೂಮಿ’ ಹಾಗೂ ‘ತಲ್ಲೂರು ಫ್ಯಾಮಿಲಿ ಟ್ರಸ್ಟ್’ ಕೃತಾರ್ಥವಾಗುತ್ತಿದೆ.
ರಂಗಭೂಮಿ (ರಿ.) ಉಡುಪಿ
ಕುತ್ಪಾಡಿ ಆನಂದ ಗಾಣಿಗರ ಸಾರಥ್ಯದಲ್ಲಿ ಡಾ. ಕೆ.ಎಲ್. ಐತಾಳ್, ವೆಂಕಟಾಚಲ ಭಟ್, ಎಸ್.ಎಲ್. ನಾರಾಯಣ್ ಭಟ್, ಪುಂಡಲೀಕ ಶೆಣೈ, ಡಾ. ಬಿ.ಟಿ. ಶೆಟ್ಟಿ, ಮುಂತಾದ ಸಮಾನ ಮನಸ್ಕರ ಸಹಕಾರದಿಂದ 1965ರಲ್ಲಿ ‘ರಂಗಭೂಮಿ’ ಉಡುಪಿ ಸಂಸ್ಥೆಯು ಉಡುಪಿಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಕೆ. ಶಿವರಾಮ ಕಾರಂತರಿಂದ ಉದ್ಘಾಟಿಸಲ್ಪಟ್ಟಿತು. ಉಡುಪಿಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮುನ್ನಡೆಸುವಲ್ಲಿ ಈ ಹವ್ಯಾಸಿ ನಾಟಕ ಸಂಸ್ಥೆಯ ಕೊಡುಗೆ ಅನನ್ಯವಾದುದು. ಕರ್ನಾಟಕ ನಾಟಕ ಅಕಾಡೆಮಿಯಿಂದ ಮಾನ್ಯತೆ ಪಡೆದಿರುವ, 1966ರಲ್ಲಿ ನೋಂದಾಯಿತ ಈ ಸಂಸ್ಥೆಯು ಡಾ. ಟಿ.ಎಂ.ಎ. ಪೈ, ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ. ಎಂ. ಮೋಹನ್ ಆಳ್ವ, ಪಿ.ವಿ.ಎಸ್ ಸಮೂಹ ಸಂಸ್ಥೆ, ಯು. ವಿಶ್ವನಾಥ ಶೆಣೈ, ಪ್ರಮೋದ್ ಮಧ್ವರಾಜ್, ಕೆ. ರಘುಪತಿ ಭಟ್ ಇನ್ನೂ ಹಲವಾರು ಮಹನೀಯರ ಪ್ರೋತ್ಸಾಹದಿಂದ ಸುವರ್ಣ ಮಹೋತ್ಸವ ಸಂಭ್ರಮವನ್ನು ಆಚರಿಸಿದ್ದು, ಇದೀಗ 57 ಸಾರ್ಥಕ ಸಂವತ್ಸರಗಳನ್ನು ದಾಟಿರುತ್ತದೆ.
ರಾಜ್ಯದ ಹಲವು ಉತ್ತಮ ನಾಟಕಗಳಿಗೆ ಉಡುಪಿಯಲ್ಲಿ ವೇದಿಕೆಯನ್ನು ಒದಗಿಸುವ ಸಲುವಾಗಿ ನಾಟಕೋತ್ಸವಗಳು, ನಾಟಕ ರಚನಾ ಸ್ಪರ್ಧೆ, 43 ವರ್ಷಗಳಿಂದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ, ಮಕ್ಕಳ ರಂಗಭೂಮಿ, ಬೇಸಿಗೆ ಶಿಬಿರಗಳು, ಪ್ರತೀ ತಿಂಗಳ 2ನೇ ಅಥವಾ 3ನೇ ಶನಿವಾರ ಮತ್ತು ಭಾನುವಾರಗಳಂದು ರಾಜ್ಯದ ಖ್ಯಾತ ರಂಗಕರ್ಮಿಗಳಿಂದ ರಂಗ ತರಬೇತಿ ಶಿಬಿರ, ತಿಂಗಳಿಗೊಂದು ‘ಮಾಸದ ಚಿತ್ರ’, ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಬಿರುದಿನೊಂದಿಗೆ ಸನ್ಮಾನ, ರಂಗತರಬೇತಿ ಶಿಬಿರಗಳು, ರಂಗಭೂಮಿ ತಂಡದಿಂದ ಹೊಸ ನಾಟಕಗಳ ತಯಾರಿ ಹಾಗೂ ರಾಜ್ಯದ ಮತ್ತು ದೇಶದ ವಿವಿದೆಡೆ ಪ್ರದರ್ಶನ, ಸಾಮಾಜಿಕ ಜಾಗೃತಿಗಾಗಿ ಬೀದಿ ನಾಟಕಗಳು, ಶಾಲಾ ಕಾಲೇಜುಗಳಲ್ಲಿ ಅಭಿನಯ ತರಬೇತಿ …… ಹೀಗೆ ‘ರಂಗಭೂಮಿ’ ಚಟುವಟಿಕೆಗಳು ನಿರಂತರ.