ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾಶನ ಸಂಸ್ಥೆಗಳಿಗೆ ಕೊಡಮಾಡುವ 2022 ಹಾಗೂ 2023ನೇ ಸಾಲಿನ ʻಅಂಕಿತ ಪುಸ್ತಕ ಪುರಸ್ಕಾರʼದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು 35,000 (ಮೂವತೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದವರು ಕನ್ನಡ ಪ್ರಕಾಶಕರಿಗಾಗಿ ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ.
ಕನ್ನಡ ಪ್ರಕಾಶಕರಿಗಾಗಿ ಮಿಸಲಿಟ್ಟ ರಾಜ್ಯಮಟ್ಟದ ಈ ಪುರಸ್ಕಾರವನ್ನು ʻವರ್ಷದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ-ಅಂಕಿತ ಪುಸ್ತಕ ಪುರಸ್ಕಾರʼ ದತ್ತಿ ಹೆಸರಿನಲ್ಲಿ ಪ್ರಶಸ್ತಿಯನ್ನುನೀಡಬೇಕು ಎನ್ನುವುದು ದತ್ತಿ ದಾನಿಗಳ ಆಶಯವಾಗಿದೆ. ಅದರಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ನೀಡುತ್ತ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಪ್ರಕಾಶನ ಕ್ಷೇತ್ರದಲ್ಲಿ ನಿರಂತರ 10 ವರ್ಷಗಳಿಂದ ಚಾಲ್ತಿಯಲ್ಲಿದ್ದು ಕನ್ನಡ ಪುಸ್ತಗಳನ್ನು ಪ್ರಕಟಿಸುವ ಮೂಲಕ ಕನ್ನಡದ ಸೇವೆ ಸಲ್ಲಿಸುತ್ತಿರುವ ಪ್ರಕಾಶನವನ್ನು ಗುರುತಿಸಿ ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಯಾವುದೇ ಕರ‍್ಯಕ್ರಮ ನಡೆಯದೇ ಇರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯ ಪ್ರಕಟಣೆ ಬಾಕಿ ಇತ್ತು. ಪ್ರಸ್ತುತ ನಾಡೋಜ ಡಾ.ಮಹೇಶ ಜೋಶಿ ಅವರ ಅಧ್ಯಕ್ಷ ಅವಧಿಯಲ್ಲಿ ಬಾಕಿ ಉಳಿದಿದ್ದ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
ʻ2022ನೆಯ ಸಾಲಿನ ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿʼಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದ “ರವೀಂದ್ರ ಪುಸ್ತಕಾಲಯ” ಹಾಗೂ 2023ನೆಯ ಸಾಲಿನ ಪುರಸ್ಕಾರಕ್ಕೆ ಬೆಂಗಳೂರಿನ “ಛಂದ ಪುಸ್ತಕ” ಸಂಸ್ಥೆಯನ್ನು ಆಯ್ಕೆ ಸಮಿತಿ ಆಯ್ಕೆಮಾಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿಯು ಪ್ರಕಾಶನ ಸಂಸ್ಥೆಗಳಿಗೆ ಅತೀ ಮಹತ್ವವಾದ ಪುರಸ್ಕಾರವಾಗಿರುತ್ತದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯಲ್ಲಿಯೇ ವಿವಿಧ ವಿಭಾಗದ ಪುಸ್ತಕಗಳನ್ನು ಸಮಾಜಕ್ಕೆ ನೀಡುವ ಮೂಲಕ ಕನ್ನಡದ ಸೇವೆಯಲ್ಲಿ ತೋಡಗಿಕೊಂಡಿರುವ ಪ್ರಕಾಶನ ಸಂಸ್ಥೆಗಳನ್ನು ಹುಡುಕಿ ಸೂಕ್ತ ಸಂಸ್ಥೆಗೆ ಪರಿಷತ್ತು ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿದೆ. ಈ ಬಾರಿ ಆಯ್ಕೆಯಾಗಿರುವ ರವೀಂದ್ರ ಪುಸ್ತಕಾಲಯ ಹಾಗೂ ಛಂದ ಪುಸ್ತಕ ಸಂಸ್ಥೆಯವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ಶ್ರೀ ಪ್ರಕಾಶ್ ಕಂಬತ್ತಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ʻರವೀಂದ್ರ ಪುಸ್ತಕಾಲಯʼ ಹಾಗೂ ʻಛಂದ ಪುಸ್ತಕʼ ಸಂಸ್ಥೆಗಳು ʻಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿಗೆʼ ಆಯ್ಕೆ
Previous Articleಚಿತ್ತಾಲ ಚಿತ್ತ | ಜೂನ್ 10
Next Article ತೆಕ್ಕಟ್ಟೆಯಲ್ಲಿ ಯಕ್ಷಗಾನ ಹಿಮ್ಮೇಳ ತರಗತಿ ಆರಂಭ